ಕಾರು ಸಹಿತ ಆರೋಪಿ ಅರೆಸ್ಟ್: ಹೀಗಿದೆ ಅಂತರ್ ಜಿಲ್ಲಾ ಕಳ್ಳನ ಕ್ರೈಮ್ ಹಿಸ್ಟ್ರಿ!
ಉಡುಪಿ: ನಗರದಲ್ಲಿ ಕೆಲವು ದಿನಗಳ ಹಿಂದೆ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರು ಉತ್ತರಹಳ್ಳಿಯ ಭುವನೇಶ್ವರಿ ನಗರದ ನಿವಾಸಿ ಮಂಜುನಾಥ ಯಾನೆ ಕಲ್ಕೆರೆ ಮಂಜ(43) ಎಂದು ಗುರುತಿಸಲಾಗಿದೆ. ಈತನಿಂದ 31,55,930ರೂ. ವೌಲ್ಯದ 530ಗ್ರಾಂ ಚಿನ್ನಾಭರಣ ಹಾಗೂ 15,12,000ರೂ. ವೌಲ್ಯದ 16.800ಗ್ರಾಂ ಬೆಳ್ಳಿಯ ಆಭರಣಗಳನ್ನು ಮತ್ತು ಕಳವು ಮಾಡಲು ಬಳಸಿದ 2.50ಲಕ್ಷ ರೂ.ವೌಲ್ಯದ ಕಾರು ವಶಪಡಿಸಿ ಕೊಳ್ಳಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ ತಿಳಿಸಿದ್ದಾರೆ.
ಅ.8ರಂದು ರಾತ್ರಿ ಕುಂಜಿಬೆಟ್ಟುವಿನ ಅಮ್ಮುಂಜೆ ವಿಠಲದಾಸ್ ನಾಯಕ್ ಎಂಬವರ ಮನೆಗೆ ನುಗ್ಗಿದ ಕಳ್ಳರು, ಒಟ್ಟು 73,06,800ರೂ. ವೌಲ್ಯದ 1,882 ಗ್ರಾಂ ತೂಕದ ಚಿನ್ನಾಭರಣ ಹಾಗೂ 7450 ಗ್ರಾಂ ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪ, ಉಡುಪಿ ನಗರ ಠಾಣಾ ಎಸ್ಸೈ ಪುನೀತ್ ಕುಮಾರ್ ಬಿ.ಇ. ಹಾಗೂ ಈರಣ್ಣ ಶಿರಗುಂಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಅದರಂತೆ ತಂಡವು ಅ.31ರಂದು ಆರೋಪಿ ಮಂಜುನಾಥನನ್ನು ಉಡುಪಿ ಉದ್ಯಾವರ ಸಮೀಪದ ಬಲಾಯಿ ಪಾದೆ ಬಳಿ ಕಾರು ಸಹಿತ ವಶಕ್ಕೆ ಪಡೆದುಕೊಂಡರು. ಉಳಿದ ಸೊತ್ತುಗಳನ್ನು ಇನ್ನೂ ವಶಪಡಿಸಿಕೊಳ್ಳಬೇಕಾಗಿದೆ.
ಆರೋಪಿಯು ಬ್ರಹ್ಮಾವರ, ತರಿಕೆರೆ, ಅರಸಿಕೇರೆ ಮತ್ತು ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿಯೂ ಕೂಡಾ ಭಾಗಿಯಾಗಿದ್ದಾನೆ. ಈತನ ವಿರುದ್ಧ ಈಗಾಗಲೇ ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಟುವರಿ ಎಸ್ಪಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಡಿವೈಎಸ್ಪಿ ದಿನಕರ ಪಿ.ಕೆ., ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪಡಿ.ಆರ್. ಉಪಸ್ಥಿತರಿದ್ದರು.