ತಾಲಿಬಾನ್ ಗೆ ಏಕೈಕ ಪರಿಹಾರವೆಂದರೆ ಬಜರಂಗ ಬಲಿಯ ಗದೆ: ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಯೋಗಿ ಆದಿತ್ಯನಾಥ್ ಹೋಲಿಕೆ
ಗಾಝಾದಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಜಗಳದ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುತೂಹಲಕಾರಿ ಹೋಲಿಕೆಗಳನ್ನು ಮಾಡಿದ್ದಾರೆ. ಅಲ್ವಾರ್ ನಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, “ಗಾಜಾದಲ್ಲಿ ತಾಲಿಬಾನ್ ಮನಸ್ಥಿತಿಯನ್ನು ಹೇಗೆ ಹತ್ತಿಕ್ಕಲಾಗುತ್ತಿದೆ ಎಂಬುದನ್ನು ನೀವು ನೋಡುತ್ತಿದ್ದೀರಾ..? ಗುರಿಯನ್ನು ಹೊಡೆಯುವುದು ಮತ್ತು ಅದನ್ನು ನಿಖರವಾಗಿ ಪುಡಿಮಾಡುವುದು ಎಂದಿದ್ದಾರೆ. “ತಾಲಿಬಾನ್ ಗೆ ಪರಿಹಾರವೆಂದರೆ ನಮ್ಮ ಬಜರಂಗ ಬಲಿಯ ಗದೆ” ಎಂದಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ವಿರುದ್ಧ ಬಲವಾದ ನಿಲುವನ್ನು ತೆಗೆದುಕೊಂಡ ಸಿಎಂ ಯೋಗಿ ಆದಿತ್ಯನಾಥ್, “ಅರಾಜಕತೆ, ಗೂಂಡಾಗಿರಿ ಮತ್ತು ಭಯೋತ್ಪಾದನೆ ಸಮಾಜಕ್ಕೆ ಶಾಪವಾಗಿದೆ. ರಾಜಕೀಯವು ಅವರೊಂದಿಗೆ ಸಿಲುಕಿಕೊಂಡಾಗ, ಅದು ನಾಗರಿಕ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದ ಅವರು, ಕಾಂಗ್ರೆಸ್ ವಿರುದ್ಧ ತಮ್ಮ ಟೀಕೆಯನ್ನು ಮುಂದುವರಿಸಿದ ಯೋಗಿ, “ಸರ್ದಾರ್ ಪಟೇಲ್ ಕಾಶ್ಮೀರವನ್ನು ಭಾರತದಲ್ಲಿ ಸಂಯೋಜಿಸಿದರು. ಆದರೆ ಕಾಂಗ್ರೆಸ್ ನಾಯಕ ಜವಾಹರಲಾಲ್ ನೆಹರೂ ಅವರ ನಿರ್ಧಾರಗಳು ಭಯೋತ್ಪಾದನೆ ಹರಡಲು ಕಾರಣವಾಯಿತು. ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡಾಗ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುವಲ್ಲಿ ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದರು ಎಂದು ಗುಣಗಾನ ಮಾಡಿದರು.
ರಾಜಸ್ಥಾನದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ ಯೋಗಿ, “ಕಾಂಗ್ರೆಸ್ ಇಲ್ಲಿ ಗೆದ್ದರೆ, ತಾಲಿಬಾನ್ ಮನಸ್ಥಿತಿಯಿಂದಾಗಿ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗುತ್ತಾರೆ” ಎಂದು ಹೇಳಿಕೆ ನೀಡಿದ್ದಾರೆ.