ಬೆಳ್ಳಂಬೆಳಗ್ಗೆ ಪ್ರಪಾತಕ್ಕೆ ಉರುಳಿದ ಬಸ್: ಮಹಿಳೆಯ ದಾರುಣ ಸಾವು, ಐವರಿಗೆ ಗಂಭೀರ ಗಾಯ
ಚಿಕ್ಕಮಗಳೂರು: ಬೆಂಗಳೂರಿಂದ ಹೊರನಾಡಿಗೆ ಹೊರಟಿದ್ದ ಪ್ರವಾಸಿಗರ ಬಸ್ಸೊಂದು ಬೆಳ್ಳಂಬೆಳಗ್ಗೆ ಅಪಘಾತಕ್ಕೀಡಾಗಿದ್ದು, ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು-ಹಾಸನ-ಮೂಡಿಗೆರೆ ಮಾರ್ಗವಾಗಿ ಹೊರನಾಡಿಗೆ ಹೋಗುತ್ತಿದ್ದ ಬಸ್ ಮೂಡಿಗೆರೆ ತಾಲ್ಲೂಕಿನ ಚೀಕನಹಳ್ಳಿ ಕ್ರಾಸ್ ಬಳಿ ಮುಂಜಾನೆ 4:45 ವೇಳೆ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ.
ಘಟನೆಯಲ್ಲಿ ಯಲಹಂಕ ನಿವಾಸಿ ಸುರೇಖಾ (45) ಎಂಬವರು ಮೃತಪಟ್ಟಿದ್ದು, ಇತರ ಐವರು ಪ್ರಯಾಣಿಕರಿಗೆ ಗಂಭೀರವಾಗಿ ಗಾಯವಾಗಿದೆ. ಘಟನೆ ವೇಳೆ ಬಸ್ ನಲ್ಲಿ 48 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಜಾಗದಲ್ಲಿ ಈಗಾಗಲೇ 70ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಆದ್ರೆ, ಇನ್ನೂ ಅಧಿಕಾರಿಗಳು ನಿದ್ದೆಯಿಂದ ಎದ್ದಿಲ್ಲ. ಇಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ನಿರಂತರವಾಗಿ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಆದ್ರೆ ದಪ್ಪ ಚರ್ಮದ ಕಿವಿಯ ಅಧಿಕಾರಿಗಳಿಗೆ ಇನ್ನೂ ಜನರ ಕೂಗು ಕೇಳಿಲ್ಲ ಎನ್ನುವ ಆಕ್ರೋಶ ಕೇಳಿ ಬಂದಿದೆ.
ಇಲ್ಲಿ ಒಂದು ತಡೆಗೋಡೆ ನಿರ್ಮಾಣ ಮಾಡಬೇಕಾದರೆ, ಇನ್ನೆಷ್ಟು ಬಲಿ ನಿಮಗೆ ಬೇಕು ಅಂತ ಜನ ಅಧಿಕಾರಿಗಳನ್ನು ಪ್ರಶ್ನೆ ಮಾಡ್ತಾ ಇದ್ದಾರೆ.