ದಕ್ಷಿಣ ಕನ್ನಡ: ಇನ್ ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ: ಕೇರಳದ ಉದ್ಯಮಿಯ ಪುತ್ರ? ಅರೆಸ್ಟ್
ಇನ್ ಸ್ಟಾಗ್ರಾಂ ಮೂಲಕ ಪರಿಚಯವಾದ ಬಾಲಕಿಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆತ ಕೇರಳದ ಉದ್ಯಮಿಯೊಬ್ಬರ ಪುತ್ರ ಎಂದು ಮೂಲಗಳು ತಿಳಿಸಿವೆ.
ಬಾಲಕಿಗೆ ಇನ್’ಸ್ಟಾಗ್ರಾಂ ಮೂಲಕ ಹುಡುಗಿಯ ಹೆಸರಿನಲ್ಲಿ ಆರೋಪಿಯು ಪರಿಚಯಿಸಿಕೊಂಡಿದ್ದ. ಆಕೆಯ ಜೊತೆ ಸಲುಗೆ ಬೆಳೆಸಿಕೊಂಡ ಬಳಿಕ ತಾನು ಹುಡುಗ ಎಂಬ ವಿಚಾರವನ್ನೂ ಬಹಿರಂಗಪಡಿಸಿದ್ದ. ಆದರೆ ನಿಜ ಹೆಸರನ್ನು ಬಾಲಕಿಗೆ ತಿಳಿಸಿರಲಿಲ್ಲ. ಅವರ ನಡುವೆ ಆತ್ಮೀಯತೆ ಬೆಳೆದಿತ್ತು. ಇದನ್ನು ದುರುಪಯೋಗಪಡಿಸಿಕೊಂಡ ಆತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಆ ಬಾಲಕಿಯ ಪಕ್ಕದ ಮನೆಯ ಬಾಲಕಿಯೊಬ್ಬಳ ಜೊತೆಗೂ ಇದೇ ರೀತಿ ಇನ್’ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡು ಆಕೆಯನ್ನೂ ಲೈಂಗಿಕವಾಗಿ ದುರ್ಬಳಕೆ ಮಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಲಕಿಯರು ತಮಗೆ ಇನ್’ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನ ಬಗ್ಗೆ ಪರಸ್ಪರ ಚರ್ಚಿಸಿದ ಸಂದರ್ಭದಲ್ಲಿ ಆತ ಒಬ್ಬನೇ ವ್ಯಕ್ತಿ ಎಂಬುದು ಗೊತ್ತಾಗಿದೆ. ಬಾಲಕಿಯರರಿಬ್ಬರನ್ನೂ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಬಗ್ಗೆ ಅವರ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.
ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪೋಕ್ಸೊ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಆರೋಪಿಯನ್ನು ಉಪಾಯದಿಂದ ಕರೆಸಿಕೊಂಡು ಬಂಧಿಸಿದ್ದಾರೆ.