ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಬೇಟೆಗಾರ ಬಲಿ
05/11/2023
ಚಾಮರಾಜನಗರ: ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದು ಓರ್ವ ಬೇಟೆಗಾರ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಚೆಕ್ ಪೋಸ್ಟ್ ಸಮೀಪ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಯುವಕ ಮೃತಪಟ್ಟಿರುವ ದುರ್ದೈವಿ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ಮದ್ದೂರು ಅರಣ್ಯ ವಲಯದಲ್ಲಿ ಬೇಟೆಗೆ ಬಂದಿದ್ದ ವೇಳೆ ಗಸ್ತಿನ ಸಿಬ್ಬಂದಿ ಹಾಗೂ 8–10 ಮಂದಿ ಇದ್ದ ಬೇಟೆಗಾರರ ಗುಂಪಿನ ನಡುವೆ ಗುಂಡಿನ ಚಕಮಕಿ ನಡೆದಿದೆ.
ನಾಡಬಂದೂಕುಗಳಿಂದ ಕಳ್ಳಬೇಟೆಗೆ ಬಂದು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾದ ವೇಳೆ ಈ ಘಟನೆ ನಡೆದಿದೆ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಂಡೀಪುರ ಸಿಎಫ್ ಒ ರಮೇಶ್ ಕುಮಾರ್ ತಿಳಿಸಿದ್ದಾರೆ. ಕಡವೆ, ಕಾಡುಹಂದಿಗಳನ್ನು ಬೇಟೆಯಾಡಲು 8-10 ಮಂದಿ ಬಂದಿದ್ದರು ಎನ್ನಲಾಗಿದೆ.