ವ್ಯಾಲಂಟೈನ್ ಡೇ | ಹುಡುಗಿಯರ ಕಾಟ ತಪ್ಪಿಸಲು 5 ದಿನ ರಜೆ ಕೇಳಿದ ವಿದ್ಯಾರ್ಥಿ | ಏನಿದು ಘಟನೆ?
ಚಾಮರಾಜನಗರ: ವ್ಯಾಲಂಟೈನ್ ಡೇ ಪ್ರಯುಕ್ತ ಹುಡುಗಿಯರ ಕಾಟದಿಂದ ತಪ್ಪಿಸಿಕೊಳ್ಳಲು ತನಗೆ 5 ದಿನಗಳ ರಜೆ ಬೇಕು ಎಂದು ವಿದ್ಯಾರ್ಥಿಯೋರ್ವನ ಹೆಸರಿನಲ್ಲಿ ನಕಲಿ ರಜಾ ಅರ್ಜಿಯನ್ನು ಸೃಷ್ಟಿಸಲಾಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿ ಎಸ್. ಶಿವರಾಜು ಹೆಸರಿನಲ್ಲಿ ಈ ನಕಲಿ ರಜೆ ಪತ್ರವನ್ನು ಸೃಷ್ಟಿಸಲಾಗಿದ್ದು, ಈ ಸಂಬಂಧ ಕಾಲೇಜಿನ ಪ್ರಾಂಶುಪಾಲರು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ದೇಶದಾದ್ಯಂತ ಆಚರಿಸುತ್ತಿರುವ ವ್ಯಾಲಂಟೈನ್ಸ್ ಡೇಯಲ್ಲಿ ಹುಡುಗಿಯರ ಕಾಟವನ್ನು ತಡೆಯಲಾರದೆ 5 ದಿನಗಳವರೆಗೆ (14.02.21) ರಜೆ ಕೊಡಬೇಕೆಂದು ಪ್ರಾಂಶುಪಾಲರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಬರೆಯಲಾಗಿದೆ. ತಮ್ಮ ವಿಶ್ವಾಸಿ ಶಿವರಾಜ್ ವಿಕ್ಟರ್ ಎಂದು ಪತ್ರದಲ್ಲಿ ಬರೆಯಲಾಗಿದ್ದು, ಅಲ್ಲದೇ ಪ್ರಾಂಶುಪಾಲರ ಸಹಿಯನ್ನು ಕೂಡ ಒತ್ತಿದಂತೆ ಕಂಡು ಬರುತ್ತಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು.
ಇನ್ನೂ ವಿದ್ಯಾರ್ಥಿಯು ಈ ಪತ್ರವನ್ನು ತಾನು ಬರೆದಿಲ್ಲ ಎಂದು ಹೇಳಿದ್ದಾನೆ. ಪರೀಕ್ಷೆ ಪ್ರವೇಶ ಪತ್ರ ಅಥವಾ ಸ್ಕಾಲರ್ಶಿಪ್ ಅರ್ಜಿಗೆ ಹಾಕಿದ ಸೀಲ್ ಕತ್ತರಿಸಿ ಯಾರೋ ಈ ರೀತಿ ನಕಲಿ ಸಹಿ ಸೃಷ್ಟಿಸಿರಲು ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಕೋರಿದ್ದೇವೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.