ಇರಾನ್-ಹಮಾಸ್ ಸಂಘರ್ಷ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಜೊತೆ ಪ್ರಧಾನಿ ಮೋದಿ ಮಾತುಕತೆ
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ನರೇಂದ್ರ ಮೋದಿ ಸೋಮವಾರ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರೊಂದಿಗೆ ಮಾತನಾಡಿದರು. ಸಂಘರ್ಷದ ಪರಿಣಾಮವಾಗಿ ಪಶ್ಚಿಮ ಏಷ್ಯಾದಲ್ಲಿನ ಸವಾಲಿನ ಪರಿಸ್ಥಿತಿಗಳ ಬಗ್ಗೆ ನಾಯಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನರ್ ಸ್ಥಾಪಿಸುವ ಹಂಚಿಕೆಯ ಉದ್ದೇಶದೊಂದಿಗೆ ಮೋದಿ ಮತ್ತು ರೈಸಿ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಗಟ್ಟುವ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು.
“ಪಶ್ಚಿಮ ಏಷ್ಯಾದಲ್ಲಿನ ಕಠಿಣ ಪರಿಸ್ಥಿತಿ ಮತ್ತು ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ ಇರಾನ್ ಅಧ್ಯಕ್ಷ @raisi_com ಅವರೊಂದಿಗೆ ಉತ್ತಮ ದೃಷ್ಟಿಕೋನಗಳ ವಿನಿಮಯ ಆಯಿತು. ಭಯೋತ್ಪಾದಕ ಘಟನೆಗಳು, ಹಿಂಸಾಚಾರ ಮತ್ತು ನಾಗರಿಕರ ಪ್ರಾಣಹಾನಿ ಗಂಭೀರ ವಿಚಾರವಾಗಿದೆ. ಯುದ್ಧ ಉಲ್ಬಣವನ್ನು ತಡೆಗಟ್ಟುವುದು, ನಿರಂತರ ಮಾನವೀಯ ನೆರವು ಮತ್ತು ಶಾಂತಿ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಪುನಃಸ್ಥಾಪಿಸುವುದು ಮುಖ್ಯ. ಚಬಹಾರ್ ಬಂದರು ಸೇರಿದಂತೆ ನಮ್ಮ ದ್ವಿಪಕ್ಷೀಯ ಸಹಕಾರದ ಪ್ರಗತಿಯನ್ನು ಅವರು ಸ್ವಾಗತಿಸಿದರು ಎಂದು ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸಿ ಅವರೊಂದಿಗೆ ಮಾತನಾಡಿದರು ಮತ್ತು ಗಾಜಾ ಪಟ್ಟಿಯಲ್ಲಿ ಹೆಚ್ಚುತ್ತಿರುವ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಗಳ ಅಪಾಯಗಳ ಬಗ್ಗೆ ಚರ್ಚಿಸಿದರು. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಿಂದ ಎದುರಾಗಿರುವ ಬೆದರಿಕೆಗಳ ಬಗ್ಗೆ ಉಭಯ ನಾಯಕರು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಅಕ್ಟೋಬರ್ 23 ರಂದು ಜೋರ್ಡಾನ್ ದೊರೆ ಎರಡನೇ ಅಬ್ದುಲ್ಲಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಪ್ರಧಾನಿ, ಅಲ್ಲಿ ಭಯೋತ್ಪಾದನೆ, ಹಿಂಸಾಚಾರ ಮತ್ತು ನಾಗರಿಕರ ಪ್ರಾಣಹಾನಿ ಬಗ್ಗೆ ಕಳವಳ ವ್ಯಕ್ತಪಡಿಸಿದರು.