ಸನಾತನ ಧರ್ಮವನ್ನು ನಾನು ಯಾವಾಗಲೂ ವಿರೋಧಿಸುತ್ತೇನೆ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮತ್ತೆ ಹೇಳಿಕೆ
ಸನಾತನ ಧರ್ಮವನ್ನು ನಾನು ಯಾವಾಗಲೂ ವಿರೋಧಿಸುತ್ತೇನೆ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂ, ಕೊರೊನಾಗೆ ಹೋಲಿಸಿ ವಿವಾದವೆಬ್ಬಿಸಿದ್ದ ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮಕೈಗೊಳ್ಳದ ಕಾರಣ ಪೊಲೀಸರ ವಿರುದ್ಧ ಮದ್ರಾಸ್ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಉದಯನಿಧಿ ಸ್ಟಾಲಿನ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಸನಾತನ ಧರ್ಮದ ವಿಷಯ ಹಲವು ವರ್ಷಗಳಿಂದ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ನಾನು ಯಾವಾಗಲೂ ಸನಾತನ ಧರ್ಮವನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ಇದಕ್ಕಾಗಿ ಕಾನೂನು ಹೋರಾಟ ಮಾಡುತ್ತೇನೆ. ಅಂಬೇಡ್ಕರ್, ಪೆರಿಯಾರ್ ಅಥವಾ ತಿರುಮಾವಳವನ್ ಅವರಿಗಿಂತ ಜಾಸ್ತಿ ಏನೂ ಹೇಳಿಲ್ಲ. ಮುಂದೆ ನನ್ನ ಬಳಿ ಯಾವುದೇ ಹುದ್ದೆಯೂ ಉಳಿಯದೇ ಇರಬಹುದು. ಆದರೆ, ಮನುಷ್ಯನಾಗಿರುವುದು ತುಂಬ ಮುಖ್ಯ ಎಂದು ಅವರು ಹೇಳಿದ್ದಾರೆ.
ದ್ರಾವಿಡ ಸಿದ್ಧಾಂತದ ನಿರ್ಮೂಲನೆ ಕುರಿತು ಸಂವಾದ ಏರ್ಪಡಿಸಲು ಅನುಮತಿ ನೀಡಬೇಕು ಎಂದು ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಯಾವುದೇ ಸಿದ್ಧಾಂತವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ರಾಜಕಾರಣಿಗಳು ಅಧಿಕಾರದಲ್ಲಿದ್ದೇವೆ ಎಂದು ವಿವಾದ ಸೃಷ್ಟಿ ಮಾಡುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿತ್ತು.