ರೈಲಿನೊಳಗೆ ವ್ಯಕ್ತಿ ದಿಢೀರ್ ಸಾವು: ಶವದೊಂದಿಗೆ 600 ಕಿ.ಮೀ ಪ್ರಯಾಣಿಸಿದ ರೈಲ್ವೇ ಪ್ರಯಾಣಿಕರು..!
ತಮಿಳುನಾಡು ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನ ಜನರಲ್ ಬೋಗಿಯೊಳಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ವಿಪರ್ಯಾಸವೆಂದರೆ ಆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಶವದೊಂದಿಗೆ ಸುಮಾರು 600 ಕಿ.ಮೀ ಪ್ರಯಾಣಿಸಿದ್ ವಿಚಾರನು ಬೆಳಕಿಗೆ ಬಂದಿದೆ. ಈ ರೈಲು ಚೆನ್ನೈನಿಂದ ದಿಲ್ಲಿ ಹಜರತ್ ನಿಜಾಮುದ್ದೀನ್ ಗೆ ತೆರಳುತ್ತಿತ್ತು.
ರೈಲ್ವೇ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ ಹೊರತಾಗಿಯೂ, ಅವರು ಉತ್ತರ ಪ್ರದೇಶದ ಝಾನ್ಸಿಯನ್ನು ತಲುಪುವವರೆಗೂ ಶವವನ್ನು ಸ್ಥಳಾಂತರಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ತದನಂತರ ಸರ್ಕಾರಿ ರೈಲ್ವೆ ಪೊಲೀಸರು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮೃತರನ್ನು ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ 36 ವರ್ಷದ ರಾಮ್ಜೀತ್ ಯಾದವ್ ಎಂದು ಗುರುತಿಸಲಾಗಿದ್ದು ಇವರು ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದರು. ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಮನೆ ಕಡೆ ಹೋಗಲು ಮೃತರು ತನ್ನ ಭಾವ ಗೋವರ್ಧನ್ ಅವರೊಂದಿಗೆ ಬಾಂಡಾಗೆ ಹೋಗುತ್ತಿದ್ದರು.
ರೈಲು ನಾಗ್ಪುರವನ್ನು ತಲುಪಿದಾಗ ರಾಮ್ಜೀತ್ ಅವರ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಟ್ಟಿತು. ಆದರೆ ಕೆಲವೇ ಹೊತ್ತಿನಲ್ಲಿ ಅವರು ನಿಧನರಾದರು ಎಂದು ಗೋವರ್ಧನ್ ಹೇಳಿದ್ದಾರೆ.
ನಂತರ ಪ್ರಯಾಣಿಕರು ರಾಮ್ಜೀತ್ ಅವರ ದೇಹದ ಪಕ್ಕದಲ್ಲಿ ತಮ್ಮ ಪ್ರಯಾಣವನ್ನು ಮಾಡಬೇಕಾಯಿತು. ಬೆಳಿಗ್ಗೆ ರೈಲು ಭೋಪಾಲ್ ತಲುಪಿದಾಗ ಪ್ರಯಾಣಿಕರು ಮತ್ತೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಝಾನ್ಸಿಯನ್ನು ತಲುಪಿದಾಗ ಮೃತದೇಹವನ್ನು ಹೊರತೆಗೆಯಲಾಯಿತು.