ಹಮಾಸ್ ಇಸ್ರೇಲ್ ಸಂಘರ್ಷ: ಇಸ್ರೇಲಿ-ಅಮೆರಿಕನ್ ಪೊಲೀಸ್ ಅಧಿಕಾರಿಯನ್ನು ಇರಿದು ಹತ್ಯೆ

ಕಳೆದ ತಿಂಗಳು ಇಸ್ರೇಲ್ ಮೇಲೆ ದಾಳಿ ನಡೆಸಿದಾಗ ಹಮಾಸ್ ಬಂಡುಕೋರರ ವಿರುದ್ಧ ಇಸ್ರೇಲ್ ನೆರೆಹೊರೆಯನ್ನು ರಕ್ಷಿಸಿದ್ದ 20 ವರ್ಷದ ಇಸ್ರೇಲಿ-ಅಮೆರಿಕನ್ ಪೊಲೀಸ್ ಅಧಿಕಾರಿಯನ್ನು 16 ವರ್ಷದ ದಾಳಿಕೋರ ಇರಿದು ಕೊಂದಿದ್ದಾನೆ. ಜಾರ್ಜಿಯಾದ ಸಾರ್ಜೆಂಟ್ ಎಲಿಶೆವಾ ರೋಸ್ ಇಡಾ ಲುಬಿನ್ ಅವರು ಇತರ ಇಬ್ಬರು ಅಧಿಕಾರಿಗಳೊಂದಿಗೆ ಜೆರುಸಲೇಂನ ಓಲ್ಡ್ ಸಿಟಿಯಲ್ಲಿ ಗಸ್ತು ತಿರುಗುತ್ತಿದ್ದಾಗ ಹದಿಹರೆಯದ ದಾಳಿಕೋರನೋರ್ವ ಹಲ್ಲೆ ನಡೆಸಿದ್ದಾನೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲುಬಿನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಲುಬಿನ್ ಜೊತೆಗಿದ್ದ ಮತ್ತೋರ್ವ ಅಧಿಕಾರಿ ಗಾಯಗೊಂಡ್ರೆ ಮೂರನೆಯವನು ದಾಳಿಕೋರನ ವಿರುದ್ಧ ಧೈರ್ಯದಿಂದ ಹೋರಾಡಿದ್ದಾನೆ. ಅವನು ಪೂರ್ವ ಜೆರುಸಲೇಂನ ಸೈರ್ನ ಫೆಲೆಸ್ತೀನ್ ನ ನಿವಾಸಿ ಎಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ.
ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿ ಹದಿಹರೆಯದ ದಾಳಿಕೋರನನ್ನು ಬೇಟೆಯಾಡಿತು. ಇದು ಸೈನಿಕರು ಮತ್ತು ಫೆಲೆಸ್ತೀನ್ ನಾಗರಿಕರ ನಡುವೆ ಘರ್ಷಣೆಗೆ ಕಾರಣವಾಯಿತು. ಹದಿಹರೆಯದವನನ್ನು ಗಡಿ ಪೊಲೀಸ್ ಅಧಿಕಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿದಾಗಿನಿಂದ ಗಾಝಾದಲ್ಲಿ 10,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಇಸ್ರೇಲ್‌ನಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಗಾಝಾದಲ್ಲಿನ ಬಂಡುಕೋರರ ಗುಂಪಿನ ಮೇಲೆ ವೈಮಾನಿಕ ಬಾಂಬ್ ದಾಳಿ ಮತ್ತು ನೆಲದ ಕಾರ್ಯಾಚರಣೆ ಸೇರಿದಂತೆ ಇಸ್ರೇಲ್ ಮಾರಣಾಂತಿಕ ಪ್ರತಿದಾಳಿ ನಡೆಸಿದೆ.