'ಜೈ ಭೀಮ್' ಗೆ ಯಾಕೆ ರಾಷ್ಟ್ರ ಪ್ರಶಸ್ತಿ ಕೊಡಲಿಲ್ಲ..? 'ಜ್ಯೂರಿಗಳು ಈ ಸಿನಿಮಾ ನೋಡಿಲ್ಲವೇ' ಎಂದು ಗಂಭೀರ ಪ್ರಶ್ನೆ ಕೇಳಿದ ನಟ ನಾನಿ - Mahanayaka

‘ಜೈ ಭೀಮ್’ ಗೆ ಯಾಕೆ ರಾಷ್ಟ್ರ ಪ್ರಶಸ್ತಿ ಕೊಡಲಿಲ್ಲ..? ‘ಜ್ಯೂರಿಗಳು ಈ ಸಿನಿಮಾ ನೋಡಿಲ್ಲವೇ’ ಎಂದು ಗಂಭೀರ ಪ್ರಶ್ನೆ ಕೇಳಿದ ನಟ ನಾನಿ

10/11/2023

ತಮಿಳಿನ ಹಿಟ್ ಸಿನಿಮಾ ‘ಜೈ ಭೀಮ್​’ ಮತ್ತೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ತೆಲುಗು ನಟ ನಾನಿ. ಹೌದು. ಈ ವರ್ಷ ರಾಷ್ಟ್ರ ಪ್ರಶಸ್ತಿ ಘೋಷಣೆ ಆದಾಗ ಅವರು ಗಂಭೀರ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ‘ಜೈ ಭೀಮ್’ ಸಿನಿಮಾಗೆ ಯಾಕೆ ಪ್ರಶಸ್ತಿ ಬಂದಿಲ್ಲ ಎಂದು ಅವರು ಪ್ರಶ್ನೆ ಕೇಳಿದ್ದು ಈ ವಿಚಾರ ಮತ್ತೆ ಚರ್ಚೆಗೊಳಗಾಗಿದೆ.


Provided by

‘ಇಂಡಿಯಾ ಟುಡೇ ರೌಂಡ್​ ಟೇಬಲ್​ ತೆಲಂಗಾಣ’ ವೇದಿಕೆಯಲ್ಲಿ ನಾನಿ ಅವರು ಈ ಚಿತ್ರದ ಕುರಿತು ಮಾತನಾಡಿದ್ದಾರೆ. ‘ಜೈ ಭೀಮ್​’ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಮಿಸ್​ ಆಗಿದ್ದಾಗ ನಾನಿ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ‘ಜೈ ಭೀಮ್​’ ಎಂದು ಬರೆದುಕೊಂಡು ಅದರ ಎದುರು ಒಡೆದ ಹೃದಯದ ಎಮೋಜಿ ಪೋಸ್ಟ್​ ಮಾಡಿದ್ದರು. ಈ ಬಗ್ಗೆ ತೆಲುಗು ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಈ ಕುರಿತು ಅವರು ಸ್ಪಷ್ಟನೆ ಹೀಗೆ ನೀಡಿದ್ದಾರೆ.

‘ನಾನು ಮಾಡಿದ ಪೋಸ್ಟ್​ ಅನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಯಿತು. ತೆಲುಗು ಸಿನಿಮಾಗಳು ಮಾಡಿದ ಸಾಧನೆ ಬಗ್ಗೆ ನನಗೆ ಖುಷಿ ಇದೆ. ರಾಷ್ಟ್ರ ಪ್ರಶಸ್ತಿ ಗೆದ್ದ ಅಲ್ಲು ಅರ್ಜುನ್​, ಪುಷ್ಪ ಸಿನಿಮಾ ಹಾಗೂ ಆರ್​ಆಆರ್​ಆರ್​ ಚಿತ್ರತಂಡದವರಿಗೆ ನಾನು ಅಭಿನಂದನೆ ತಿಳಿಸಿದ್ದೇನೆ. ನಾನು ನೋಡಿದ ಅತ್ಯುತ್ತಮ ಸಿನಿಮಾಗಳಲ್ಲಿ ಜೈ ಭೀಮ್​ ಕೂಡ ಒಂದು. ಆ ಸಿನಿಮಾ ನೋಡಿದ ನಂತರ ನಾನು ಟ್ವೀಟ್​ ಮಾಡಿದ್ದೆ. ಆ ಸಿನಿಮಾಗೆ ರಾಷ್ಟ್ರ ಪ್ರಶಸ್ತಿಯ ಯಾವುದೇ ವಿಭಾಗದಲ್ಲಿ ಒಂದೇ ಒಂದು ಅವಾರ್ಡ್​ ಕೂಡ ಬಂದಿಲ್ಲ ಎಂದಾಗ ಜ್ಯೂರಿಗಳು ಆ ಸಿನಿಮಾ ನೋಡಿದ್ದೀರೋ ಇಲ್ಲವೋ ಅಂತ ಪ್ರಶ್ನೆ ಮೂಡಿತು’ ಎಂದು ನಾನಿ ಮರು ಪ್ರಶ್ನೆ ಮಾಡಿದ್ದಾರೆ.


Provided by

‘ಒಂದು ಕಡೆ ನನ್ನ ತಂಗಿಗೆ ಒಳ್ಳೆಯ ಮಾರ್ಕ್ಸ್​ ಬರುತ್ತದೆ. ಇನ್ನೊಂದು ಕಡೆ ನನ್ನ ಕಸಿನ್​ಗೆ ಅದು ಸಿಗದೇ ಇದ್ದಾಗ ನನ್ನ ತಂಗಿಯ ಬಗ್ಗೆ ನಾನು ಸಂತೋಷ ವ್ಯಕ್ತಪಡಿಸುವುದರ ಜೊತೆಗೆ ಕಸಿನ್​ಗೆ ಯಾಕೆ ಸಿಗಲಿಲ್ಲ ಎಂಬುದರ ಬಗ್ಗೆ ಕಾಳಜಿ ಕೂಡ ವ್ಯಕ್ತಪಡಿಸುತ್ತೇನೆ. ಅದೇ ರೀತಿ ಜೈ ಭೀಮ್​ ಸಿನಿಮಾ ಬಗ್ಗೆ ನಾನು ಹೇಳಿದ್ದು. ಅದೊಂದು ಶ್ರೇಷ್ಠ ಸಿನಿಮಾ. ಅದರ ಬಗ್ಗೆ ನಾನು ಪೋಸ್ಟ್ ಮಾಡಿದಾಗ ತೆಲುಗು ಸಿನಿಮಾ ಪ್ರಶಸ್ತಿ ಗೆದ್ದಿದ್ದಕ್ಕೆ ನಾನಿಗೆ ಖುಷಿಯಾಗಿಲ್ಲ ಎಂದು ಕೆಲವರು ಬರೆದರು. ನನಗೆ ಖುಷಿಯಾಗಿಲ್ಲ ಎಂದು ನಾನು ಯಾವಾಗ ಹೇಳಿದೆ..? ಬೇರೆ ಭಾಷೆಯಲ್ಲೂ ಒಳ್ಳೆಯ ಸಿನಿಮಾ ಮಾಡಿದವರಿಗೆ ಪ್ರೋತ್ಸಾಹ ನೀಡಬೇಕು’ ಎಂದು ನಾನಿ ಸ್ಪಷ್ಟನೆ ನೀಡಿದರು.

ಇತ್ತೀಚಿನ ಸುದ್ದಿ