ಮಂಗಳೂರು ಬಿಜೆಪಿ ಕಚೇರಿ ಎದುರು ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ
ಮಂಗಳೂರು: ಬಿಲ್ಲವರ ಮೂಲಪುರುಷರಾದ ಕೋಟಿ ಚೆನ್ನಯರು ಹಾಗೂ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದು, ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಕೋಟಿ ಚೆನ್ನಯ ಹಾಗೂ ಜನಾರ್ದನ ಪೂಜಾರಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದು, ಅವರನ್ನು ಬಿಜೆಪಿಯಿಂದ ಉಚ್ಛಾಟಿಸುವಂತೆ ಜೆಡಿಎಸ್ ಕಾರ್ಯಕರ್ತರು ಶಾರದಾ ವಿದ್ಯಾಲಯದ ಸಮೀಪವಿರುವ ಕಲಾಕುಂಜ್ ರಸ್ತೆಯ ಬಿಜೆಪಿ ಕಚೇರಿಗೆ ಮೆರವಣಿಗೆ ನಡೆಸಿದರು. ಆದರೆ ಮೆರವಣಿಗೆ ಪೂರ್ಣಗೊಳಿಸುವ ಮೊದಲೇ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋಟಿ ಚೆನ್ನಯರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಗದೀಶ್ ಅಧಿಕಾರಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವುದರೊಂದಿಗೆ, ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದರು. ಈ ನಡುವೆ ಜೆಡಿಎಸ್, ಜಗದೀಶ್ ಅಧಿಕಾರಿಯನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬಿಲ್ಲವರ ಮೂಲಪುರುಷ ಕೋಟಿ ಚೆನ್ನಯರ ಅವಹೇಳನ ಮಾಡಿದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿಯನ್ನು ಯಾಕೆ ಇನ್ನೂ ಕೂಡ ಬಿಜೆಪಿ ಉಚ್ಛಾಟನೆ ಮಾಡಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಇತ್ತೀಚೆಗಷ್ಟೇ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದರು. ಜಗದೀಶ್ ಅಧಿಕಾರಿ ಅವರ ಹೇಳಿಕೆಯ ಬಗ್ಗೆ ಬಿಲ್ಲವ ಸಮಾಜದ ಶಾಸಕರು, ಮಂತ್ರಿಗಳು ಒಂದೇ ಒಂದು ಹೇಳಿಕೆಗಳನ್ನು ಕೂಡ ನೀಡಿಲ್ಲ, ಬಿಲ್ಲವ ಸಮುದಾಯಕ್ಕೆ ಅವಮಾನವಾದಾಗ ಹಿಂದೂ ಸಂಘಟನೆಗಳು ಕೂಡ ಮೌನವಹಿಸಿವೆ. ಇನ್ನಾದರೂ ಸಂಘಟನೆಗಳು ಜಗದೀಶ್ ಅಧಿಕಾರಿಯ ಅಹಂಕಾರದ ಹೇಳಿಕೆಗೆ ತಕ್ಕ ಉತ್ತರವನ್ನು ನೀಡಲಿ ಎಂದು ಒತ್ತಾಯಿಸಿದ್ದರು. ಇದೀಗ ಇದ್ಯಾವುದೂ ನಡೆಯದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದಿದೆ ಎಂದು ತಿಳಿದು ಬಂದಿದೆ.