ಉಡುಪಿ: ತಾಯಿ ಮಕ್ಕಳ ಹತ್ಯೆ ಪ್ರಕರಣ | ಆರೋಪಿ ಪ್ರವೀಣ್ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
ಉಡುಪಿ: ನೇಜಾರು ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗಲೆ(39)ಯನ್ನು ಉಡುಪಿ ಪೊಲೀಸರು ಇಂದು ಸಂಜೆ ಉಡುಪಿ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿ ಕಾರಿಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಿ ಆದೇಶ ನೀಡಿದೆ.
ಪ್ರಕರಣದ ತನಿಖಾಧಿಕಾರಿ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಧೀಶ ಶ್ಯಾಮ್ ಪ್ರಸಾದ್ ಆರೋಪಿಯನ್ನು ನ.28ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯುಟರ್ ಎಚ್.ಎಂ.ನದಾಫ್, ಆರೋಪಿ ಪರ ಸರಕಾರದಿಂದ ನೇಮಕ ಮಾಡಲಾದ ವಕೀಲ ರಾಜು ಪೂಜಾರಿ ಹಾಜರಿದ್ದರು.
ಸ್ಥಳದಲ್ಲಿ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ, ಡಿವೈಎಸ್ಪಿಗಳಾದ ಬೆಳ್ಳಿಯಪ್ಪ ಕೆ.ಯು., ದಿನಕರ ಕೆ.ಪಿ., ಅರವಿಂದ ಕಲಗುಜ್ಜಿ, ಪೊಲೀಸ್ ನಿರೀಕ್ಷಕ ರಾದ ಮಂಜಪ್ಪ, ದೇವರಾಜ್ ಹಾಜರಿದ್ದರು.