ರೆಸಾರ್ಟ್ ನ ಗೇಟ್ ಬಿದ್ದು ಆಟವಾಡುತ್ತಿದ್ದ ಬಾಲಕನ ದಾರುಣ ಸಾವು
22/11/2023
ಕೋಟ: ಸ್ಲೈಡಿಂಗ್ ಗೇಟ್ ಆಡುತ್ತಿದ್ದ ಮಗುವಿನ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಮಗು ಮೃತಪಟ್ಟ ಘಟನೆ ಕೋಟತಟ್ಟು ಎಂಬಲ್ಲಿ ನ.21ರಂದು ಸಂಜೆ ನಡೆದಿದೆ.
ಮೃತ ಮಗುವನ್ನು ಕಟಪಾಡಿಯ ಸುಧೀರ್ ಎಂಬವರ ಮಗ ಸುಶಾಂತ್(3) ಎಂದು ಗುರುತಿಸಲಾಗಿದೆ. ಸುಧೀರ್ 10 ದಿನಗಳ ಹಿಂದೆ ತನ್ನ ಪತ್ನಿ ಮನೆಯಾದ ಕೋಟತಟ್ಟುವಿಗೆ ಬಂದಿದ್ದು, ಅಲ್ಲಿ ಮನೆ ಸಮೀಪದ ಪೃಥ್ವಿರಾಜ್ ಎಂಬವರ ರೆಸಾರ್ಟನ ಎದುರಿನ ಗೇಟ್ ನ ಬಳಿ ಸುಶಾಂತ್ ನೆರೆಮನೆಯ ಮಕ್ಕಳೊಂದಿಗೆ ಆಡುತ್ತಿದ್ದನು. ಈ ಸಂದರ್ಭ ಸ್ಲೈಡಿಂಗ್ ಗೇಟ್ ಜಾರಿ ಸುಶಾಂತನ ಮೇಲೆ ಬಿತ್ತು.
ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಸುಶಾಂತ್, ಕೋಟ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟನು.
ಈ ಘಟನೆಗೆ ರೆಸಾರ್ಟ್ ನ ಗೇಟನ್ನು ಸರಿಯಾಗಿ ಜೋಡನೆ ಮಾಡದೇ ಗೇಟನ್ನು ಸುಸ್ಥಿತಿಯಲ್ಲಿಡದೇ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿತನ ವಹಿಸಿದ ರೆಸಾರ್ಟನ ಮಾಲಿಕ ಪೃಥ್ವಿರಾಜ್ ಹಾಗೂ ಸಂಬಂಧಪಟ್ಟವರು ಕಾರಣ ಎಂದು ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.