ಕಾದು–ಕಾದು ಬೇಸತ್ತರು: 15 ಕಿಮೀ. ರಸ್ತೆ ಸರಿಪಡಿಸಿಕೊಂಡ ಲಾರಿ ಚಾಲಕರು!!
ಚಾಮರಾಜನಗರ: ಕಳೆದ 10-15 ವರ್ಷಗಳಿಂದ ಗುಂಡಿ ಬಿದ್ದ ರಸ್ತೆಯನ್ನು ದುರಸ್ತಿ ಮಾಡಲು ಜನಪ್ರತಿನಿಧಿಗಳು ಮುಂದಾಗದ ಪರಿಣಾಮ ಬೇಸತ್ತ ಜನರೇ ರಸ್ತೆ ಸರಿಪಡಿಸಿಕೊಂಡ ಘಟನೆ ಜಿಲ್ಲೆಯ ಹನೂರು ತಾಲೂಕಿನ ಗರಿಕೆಕಂಡಿ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ರಾಮಪುರ ಗ್ರಾಮದಿಂದ ಗರಿಕೆಕಂಡಿ ಗ್ರಾಮದವರೆಗಿನ ರಸ್ತೆಗೆ ಲಾರಿ ಚಾಲಕರು ಮತ್ತು ಮಾಲೀಕರ ಸಂಘವು ಮಣ್ಣು ಹಾಕಿಸಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸೆಡ್ಡು ಹೊಡೆದಿದ್ದಾರೆ.
ಹನೂರು ತಾಲೂಕಿನ ರಾಮಪುರ ಹೋಬಳಿ ಕೇಂದ್ರ ಸ್ಥಾನದಿಂದ ಗರಿಕೆ ಕಂಡಿ ಗ್ರಾಮದ ವರೆಗಿನ 15 km ರಸ್ತೆ ಡಾಂಬರು ಕಿತ್ತು ಜಲ್ಲಿ ಕಲ್ಲುಗಳೆಲ್ಲ ಮೇಲೆದ್ದು ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು
ಸತ್ಯಮಂಗಲ ವನ್ಯ ಪ್ರಾಣಿಗಳ ಸಂರಕ್ಷಣೆ ಹಿತದೃಷ್ಟಿಯಿಂದ ಚೆನ್ನೈ ಹೈಕೋರ್ಟ್ ಬಣ್ಣಾರಿ ದಿಂಬಂನಲ್ಲಿ ಅಧಿಕ ಭಾರದ ವಾಹನಗಳನ್ನು ನಿಷೇಧ ಪಡಿಸಿ ಆರು ಚಕ್ರದ ವಾಹನಗಳಿಗೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಿತ್ತು . ಇದರಿಂದ ಹನೂರು ಮಾರ್ಗದ ಮೂಲಕ ತಮಿಳುನಾಡಿಗೆ ಅತಿ ಹೆಚ್ಚು ಲಾರಿಗಳ ಸಂಚಾರ ಪ್ರಾರಂಭವಾದ್ದರಿಂದ ರಾಮಪುರ ಗರಿಕೆಕಂಡಿ ರಸ್ತೆ ಜಲ್ಲಿಕಲ್ಲುಗಳೆಲ್ಲ ಮೇಲೆದ್ದರಿಂದ ದ್ವಿಚಕ್ರವಾಹನವು ಸಹ ಹೋಗಲು ಸಾಧ್ಯವಾಗುತ್ತಿರಲಿಲ್ಲ, ಅಧಿಕ ಲಾರಿಗಳು ಸಂಚಾರ ಪ್ರಾರಂಭ ಮಾಡಿದ ನಂತರ ರಸ್ತೆ ಯಾವುದು ಗುಂಡಿ ಯಾವುದು ಎಂಬುದೇ ತಿಳಿಯದೆ ಹಲವಾರು ಅಪಘಾತಗಳಾಗಿದ್ದವು.
ತಮಿಳುನಾಡಿಗೆ ಜೋಳ ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದ ಘಟನೆಯೂ ನಡೆದಿತ್ತು.
ರಾಮಾಪುರ ಹಾಗೂ ಹನೂರು ಪಟ್ಟಣಕ್ಕೆ ಆಗಮಿಸುತ್ತಿದ್ದ ಬೈಕ್ ಸವಾರರು ಬಿದ್ದು ಗಾಯಗೊಂಡಿರುವುದು ಲೆಕ್ಕವೇ ಇಲ್ಲ, ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಬರಲು ಸಹ ಸಾಧ್ಯವಾಗದೇ ರೋಗಿಗಳು ಸಹ ಪರದಾಡಿದ್ದಾರೆ. ಆದರೂ ಕೂಡ ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳು ರಸ್ತೆ ಅಭಿವೃದ್ಧಿಪಡಿಸಲು ವಿಫಲರಾಗಿದ್ದರಿಂದ ರಾಮಾಪುರ ಲಾರಿ ಅಸೋಸಿಯನ್ ಮಾಲೀಕರುಗಳು ತಾವೇ ತಮ್ಮ ಸ್ವಂತ ಹಣದಲ್ಲಿ ಮಣ್ಣು ಹಾಕಿ ಗುಂಡಿ ಮುಚ್ಚಿಸುವ ಮೂಲಕ ತಮ್ಮ ವಾಹನಗಳ ಸುರಕ್ಷತೆಯನ್ನು ಕಾಪಾಡಿಕೊಂಡಿದ್ದಾರೆ.
ಕಳೆದ ಮೂರು ಅವಧಿಯಲ್ಲಿ ನರೇಂದ್ರ ಶಾಸಕರಾಗಿದ್ದರು ಅವರು ರಸ್ತೆ ಅಭಿವೃದ್ಧಿಪಡಿಸಲಿಲ್ಲ ಇದೀಗ ಜೆಡಿಎಸ್ ಮಂಜುನಾಥ್ ರವರು ಸಹ ಶಾಸಕರಾಗಿ ಆಯ್ಕೆಯಾಗಿ ಆರು ತಿಂಗಳು ಕಳೆದರೂ ಸಹ ರಸ್ತೆ ಅಭಿವೃದ್ಧಿಪಡಿಸಿಲ್ಲ ಆದ್ದರಿಂದ ಲಾರಿ ಅಸೋಸಿಯನ್ ಮಾಲೀಕರು ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಲಾರಿ ಮಾಲೀಕರಿಂದ ಹಣ ಸಂಗ್ರಹಿಸಿ ಎರಡುವರೆ ಲಕ್ಷ ವೆಚ್ಚದಲ್ಲಿ ಗುಂಡಿ ಬಿದ್ದಿರುವ ರಸ್ತೆಯನ್ನು ಮುಚ್ಚಿದ್ದೇವೆ ಎಂದು ರಾಮಾಪುರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಹೇಳಿದ್ದಾರೆ.