ಚೆನ್ನೈನಲ್ಲಿ ಮಳೆ ಅಬ್ಬರ: ತಮಿಳುನಾಡು-ಆಂಧ್ರ ಕರಾವಳಿಯಲ್ಲಿ 3 ದಿನಗಳಲ್ಲಿ ಚಂಡಮಾರುತ ಸಾಧ್ಯತೆ
ತಮಿಳುನಾಡಿನ ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆದಿದ್ದು, ಅನೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ ಮತ್ತು ಟ್ರಾಫಿಕ್ ಜಾಮ್ ಉಂಟಾಗಿದೆ. ಡಿಸೆಂಬರ್ 1 ರಿಂದ 4 ರ ನಡುವೆ ವಿಶೇಷವಾಗಿ ತಮಿಳುನಾಡಿನ ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ಪ್ರಕಾರ, ಚೆನ್ನೈ ಮತ್ತು ತಮಿಳುನಾಡಿನ ಇತರ ಐದು ಜಿಲ್ಲೆಗಳಲ್ಲಿ ಶುಕ್ರವಾರ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈ ಪ್ರದೇಶಗಳಲ್ಲಿ ಚೆಂಗಲ್ಪಟ್ಟು, ತಿರುವಳ್ಳೂರು, ನಾಗಪಟ್ಟಿಣಂ, ರಾಮನಾಥಪುರಂ ಮತ್ತು ಕಾಂಚೀಪುರಂ ಸೇರಿವೆ.
ಚೆನ್ನೈ ಮತ್ತು ತಮಿಳುನಾಡಿನ ಇತರ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿನ ದೃಶ್ಯಗಳು ತೋರಿಸಿವೆ. ಜನರು ರೈನ್ ಕೋಟ್ ಗಳನ್ನು ಧರಿಸಿ ಅಥವಾ ಛತ್ರಿಗಳನ್ನು ಹಿಡಿದುಕೊಂಡು ಜಲಾವೃತ ಬೀದಿಗಳಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.
ಚೆನ್ನೈ ಮತ್ತು ಇತರ ಜಿಲ್ಲೆಗಳ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿಲ್ಲ. ಚೆಂಬರಂಬಕ್ಕಂ ಸರೋವರದಿಂದ ನೀರನ್ನು ಬಿಡುಗಡೆ ಮಾಡಿದ್ದರಿಂದ ಕಾಂಚೀಪುರಂ ಜಿಲ್ಲೆಯ ಅಡ್ಯಾರ್ ನದಿಯ ದಡದಲ್ಲಿರುವ ತಗ್ಗು ಪ್ರದೇಶಗಳು ಮತ್ತು ಆರು ಗ್ರಾಮಗಳಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.