ಪಡಿತರ ಚೀಟಿ ರದ್ದು ಹೇಳಿಕೆ  | ಸಾಮಾಜಿಕ ಜಾಲತಾಣಗಳಲ್ಲಿ ಹತ್ತಿಕೊಂಡಿತು  ಬೆಂಕಿ | ಸರ್ಕಾರಕ್ಕೆ ಜನ ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ - Mahanayaka

ಪಡಿತರ ಚೀಟಿ ರದ್ದು ಹೇಳಿಕೆ  | ಸಾಮಾಜಿಕ ಜಾಲತಾಣಗಳಲ್ಲಿ ಹತ್ತಿಕೊಂಡಿತು  ಬೆಂಕಿ | ಸರ್ಕಾರಕ್ಕೆ ಜನ ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ

15/02/2021

ಬೆಂಗಳೂರು: ಬೈಕ್, ಫ್ರಿಡ್ಜ್, ಟಿವಿ, 5 ಎಕರೆ ಜಮೀನು  ಇದ್ದವರಿಗೆ ಪಡಿತರ ಚೀಟಿ ರದ್ದು ಮಾಡುವ ವಿಚಾರವಾಗಿ ಉಮೇಶ್ ಕತ್ತಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ನೆಟ್ಟಿಗರು ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದು, ಉಮೇಶ್ ಕತ್ತಿ ಅವರು ಕಾಡಿಬೇಡಿ, ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವುದು ಈ ಸೌಭಾಗ್ಯಕ್ಕಾ? ಎಂದು ಪ್ರಶ್ನಿಸಿದ್ದಾರೆ.

ನಾವು ಕಂಡ ಹಾಗೆ ಎಲ್ಲ ಇರುವವರು ಕೂಡ BPL card ಬಳಸುತ್ತಿದ್ದಾರೆ..ಸ್ವಂತ ಮನೆ, ಕಾರ್ ಎಲ್ಲ ಇರುವರು, ಅರ್ಹತೆ ಇರುವವರಿಗೆ ಸಿಗುವುದಾದರೆ ಅದು ಒಳ್ಳೆಯ ಕೆಲಸ..ಆದರೆ ಗಾಡಿ, ಟಿವಿ ಇಂದಿನ ದಿನದಲ್ಲಿ ಕೂಲಿ ಕೆಲಸ ಮಾಡುವರು ಕೂಡ ಇಟ್ಟುಕೊಂಡಿರುವುದು ಸಹಜ..ಅವರಿಗೆ ಕೆಲ್ಸಕ್ಕೆ ಹೋಗಲು ಬರಲು…ಮತ್ತು ಅವರಿಗೆ ಮನರಂಜನೆ ಬೇಡವೇ..ಶ್ರಮ ಜೀವಿಗಳಿಗೆ …

ಈ ಎರಡು ಮಾನದಂಡ ಬಿಟ್ಟು ಬೇರೆ ರೀತಿಯಲ್ಲಿ ಯೋಚಿಸಿ ಅಕ್ರಮ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲು ಯೋಜನೆ ಮಾಡಬೇಕಾಗುತ್ತದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾನ್ಯ ಸಚಿವರೇ… ಈ ಮಾತು ಹೇಳೊದಕ್ಕ ನೀವು ಕಾಡಿಬೇಡಿ ಸಚಿವರಾಗಿದ್ದು, ಅಲ್ರೀ ಸ್ವಾಮಿ ಏನು ನಿಮ್ಮ ಮಾತಿನ ಅರ್ಥ. ಬಡವರು ಬಡವರಾಗಿಯೇ ಉಳಿಯಬೇಕ ! ಟಿವಿ ಫ್ರಿಡ್ಜ್, ಬೈಕ್ ಇವೆಲ್ಲಾ ಬಿಪಿಎಲ್ ಕಾರ್ಡ್ಗಳಿಗೆ ಒಂದು ಮಾನದಂಡವೇ! ಕೋಟಿ ಕೋಟಿ ಇರೋರತ್ತಿರ ಹೋಗಿ ಕೇಳ್ರಿ , ಪಾಪ ಬಡಪಾಯಿಗಳು ಬರೋ ಸಂಬಳದಲ್ಲಿ ಅಲ್ಪ ಸ್ವಲ್ಪ ಉಳಿಸಿಕೊಂಡು ನಾವು ನಾಲ್ಕು ಜನ ಮೆಚ್ಚೋ ಹಾಗೆ ಬದುಕಬೇಕು ಅಂತ ಒಂದು ಟಿವಿನೊ ಫ್ರಿಡ್ಜ್ಜೊ ತಗೊಂಡ್ರೆ ಅದರ ಮೇಲೆ ಯಾಕ್ರೀ ಕಣ್ಣಾಕ್ತ ಇದ್ದೀರಾ. ನಿಮ್ಮ ಕೈಲಾದರೆ ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡಿ ಇಲ್ಲಾ ಅಂದ್ರೆ ದಯವಿಟ್ಟು ಸುಮ್ಮನಿದ್ದು ಬಿಡಿ ಎಂದು ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಂತ ಒಂದು ಪುಟ್ಟ ಮನೆಯೂ ಇಲ್ಲದ ದಿನಗೂಲಿ ಕಾರ್ಮಿಕರ ಮನೆಯಲ್ಲಿ ಸಹಾ ಟಿವಿ ಫ್ರಿಜ್ಜ್ ಬೈಕ್ ಇರುತ್ತದೆ . ಹಾಗಾದರೆ ಅವರಿಗೆ ಬಿಪಿಎಲ್ ಕಾರ್ಡ್ ಇಲ್ಲ ಅನ್ನೋ ದು ಕತ್ತಿ ವರಸೆ! ಸ್ವಾಮಿ ಕಾಲ ಬದಲಾಗಿದೆ ಅರೆ ಹೊಟ್ಟೆ ಉಂಡು ಉಳಿತಾಯ ಮಾಡಿ ಸೆಕೆಂಡ್ ಹ್ಯಾಂಡ್ ಬೈಕ್ ತೆಗೆದುಕೊಂಡು ತಿರುಗಾಡಲು ಅನು ಕೂಲ ಇರಲಿ ಬಸ್ಸಿನ ಹಣ ಉಳಿಯುತ್ತದೆ ಅನ್ನೋ ಕಡು ಬಡವರ ಕಷ್ಟ ಐಷಾರಾಮಿ ಬದುಕು ನಡೆಸುತ್ತಿರುವ ನಿಮಗೇನು ಗೊತ್ತು? ಸಾಧ್ಯವಾದರೆ ಮನೆ ಮನೆ ಸರ್ವೆ ನಡೆಸಿ ಆಗ ಅವರು ಶ್ರೀಮಂತ ರೋ ಬಡವರೋ ಅನ್ನೋ ದು ಅವರ ಜೀವನ ಶೈಲಿಯಿಂದ ನೋಡಿ. ಅದು ಬಿಟ್ಟು ಈ ರೀತಿಯ ಬಾಲಿಶ ಹೇಳಿಕೆ ನೀಡಿ ನಿಜವಾದ ಬಡವರ ಅನ್ನದ ತಟ್ಟೆ ಕಸಿದು ಕೊಳ್ಳುವ ಪಾಪ ಮಾಡ ಬೇಡಿ. ಈಕಾಲದಲ್ಲಿ ಪ್ರತಿ ಮನೆಯಲ್ಲೂ ಟಿವಿ ಇದೆ. ಸಂಜೆಯ ವರೆಗೂ ದುಡಿದು ಬರುವ ಜೀವಕ್ಕೆ ಇದೊಂದೇ ಮನ ರಂಜನೆ ಎಂದು ಮಾರ್ಮಿಕವಾಗಿ ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಈ ತರಹದ ಕಾಯಿದೆ ಕಾನೂನು ಆದರೆ ರಾಜ್ಯದಲ್ಲಿ ಯಾರು ಬಿಪಿಎಲ್ ಕುಟುಂಬದ ಸದಸ್ಯರು ಸಿಗುವುದು ಕಷ್ಟಕರ ಈಗಾಗಲೇ ಎಲ್ಲರ ಮನೆಯಲ್ಲಿ ಟಿವಿ ಮೊಬೈಲ್ ಬೈಕ್ ಇರುವವರು ಬಹಳಷ್ಟು ಜನರು ಇದ್ದಾರೆ. ನೀವು ಹೇಳಿದಾಗೆ ಮಾಡಿದರೆ ಬಹಳಷ್ಟು ರೇಷನ ಉಳಿಯುವುದು ಅನಿಸುತ್ತದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಮೊದಲು ಶ್ರೀಮಂತ ರ ಮನೆಗಳಲ್ಲಿ ಇರುವ ಬಿ ಪಿ ಎಲ್ ಕಾರ್ಡು ಗಳನ್ನು ವಾಪಸ್ ಪಡೆಯಿರಿ ನಂತರ ಟಿ ವಿ ಫ್ರಿಡ್ಜ್ ಇರೋರ ಮನೆಗೆ ಹೋಗುವಿರಂತೆ ಕೋಟಿಕೋಟಿ ಲೂಟಿ ಮಾಡುವವರನ್ನು ಹಾಗೆ ವಾಪಸ್ ತಂದು ಕೊಡಿ ಅಂತ ಕೇಳಿ ಸರ್ಕಾರದ ವರು ಬಿ ಪಿ ಎಲ್ ಕಾರ್ಡ್ ಬಡವರ ಇದೆ ಅಂತ ನಿಮಗೆ ಅನಿಸುತ್ತಿದೆಯಾ ಆಹಾರ ಮಂತ್ರಿಗಳೇ… ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಯೋಜನೆ ತಂದ್ರೆ ಬಡವರಿಗೆ ಉಪಯೋಗವಾಗುವ ರೀತಿಯಲ್ಲಿ ಯೋಜನೆ ತನ್ನಿ.. ನಿಮ್ಮ ಮುಖ ಕೊಟ್ಟು ಬೆಂಕಿ ಹಾಕ …ಈಗ ಯಾರ ಮನೆಯಲ್ಲಿ ಟಿವಿ ಇಲ್ಲ ಎಲ್ಲರೂ ಮನೆಯಲ್ಲಿಯು ಇದೆ. ಮಂತ್ರಿ ಸ್ಥಾನ ಸಿಕ್ಕಿದೆ ಅಂತ ತಿರುಕನ ಕನಸು ಕಾಣ್ತಾ ಇದ್ದೀರಲ್ಲ ಉಮೇಶ್ ಕತ್ತಿ ಅವರೇ …ನಿಮ್ಮ ತಂದೆಯವರ ಆಸ್ತಿ ಎಷ್ಟು ಇತ್ತು ಯಾವಾಗ ನಿನ್ನ ಆಸ್ತಿ ಎಷ್ಟಿದೆ ಎಷ್ಟು ಇಂಪ್ರೂವ್ ಮೆಂಟ್ ಆಗಿದೆ ನೀನು ಸರಕಾರದಿಂದ ಪಡಿದಿರುವ ಸವಲತ್ತುಗಳನ್ನು ವಾಪಸ್ ಕೊಟ್ಟುಬಿಡು ಎಂದು ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನ್ ಮಂತ್ರಿ ಗುರು ಬಡವರು ಬಡವರಾಗೇ ಇದ್ದುಬಿಡಿ ಎಂದು ಹೇಳ್ತಿರಲ್ಲ ಮತ್ತೆ ಭಾಷಣ ಮಾಡಬೇಕಾದರೆ ಬಡತನ ನಿರ್ಮೂಲನೆ ಮಾಡ್ತೀವಿ ಅಂತ ಹೇಳುತ್ತೀರಾ ದೂರ ದೂರದ ಕೆಲಸಕ್ಕೆ ಹೋಗಬೇಕೆಂದು ಅವನು ಸಾಲ ಮಾಡಿ ಫೈನಾನ್ಸ್ ಕಟ್ಟಿ ಬೈಕ್ ತೆಗೆದುಕೊಂಡಿರುತ್ತಾರೆ ಅಂತವರು ನಿಮ್ಮ ಕಣ್ಣಿಗೆ ಆಗರ್ಭ ಶ್ರೀಮಂತನ ತರ ಕಾಣ್ತಾರೆ ಎಂದರೆ ಏನು ಹೇಳಬೇಕು ಮಹಾಮಂತ್ರಿಗಳು ಎಂದು ವ್ಯಕ್ತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ‌ಹಳ್ಳಿಗಳಿಗೆ ರಸ್ತೆ ಬಸ್ ವ್ಯವಸ್ಥೆ ಮಾಡಿಕೊಡಿ… ಎಷ್ಟು ಹಳ್ಳಿಗಳಿಗೆ ಇಂದಿಗೂ ಸಹ ಸರಿಯಾದ ರಸ್ತೆ ಇಲ್ಲ ಬಸ್ ಇಲ್ಲ… ಬೈಕ್ ಇರಬಾರದು ಅಂತೆ….ಪಕ್ಕದ ಊರಿನ ಡೈರಿಗೆ ಹಾಲು ಹಾಕೋಕೆ ಬಸ್ ಬಿಡುತ್ತಿರಾ…ಕಷ್ಟ ಪಟ್ಟು ದುಡಿದು ತಗೊಂಡಿರುತ್ತಾರೆ… ಮನೆಮಂದಿ ಎಲ್ಲಾಕೂಲಿ ಕೆಲಸ ಮಾಡಿ ತಗೊಂಡು ಇರುತ್ತಾರೆ…. ನಿಮ್ಮ ಹಾಗೆ ನಮ್ಮ ತೆರಿಗೆ ದುಡ್ಡುಲ್ಲಿ ಕೋಟಿ ಆಸ್ತಿ ಹಣ ಮಾಡಿ ತಗೊಂಡಿಲ್ಲ…ಈ ತರಹ ಕೇಳುವುದು ತಪ್ಪು ಎಕೆಂದರೆ ದೇಶ ದ್ರೋಹಿ ಪಟ್ಟ ಕಟ್ಟುವವರು… ಸರ್ಕಾರದ ವಿರುದ್ಧ ಮಾತು ಆಡಿದರೆ ಎಂದು ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಮೇಶ್ ಕತ್ತಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹತ್ತಿಕೊಂಡಿದೆ. ರಾಜ್ಯ ಸರ್ಕಾರ ಸಿನಿಮೀಯ ಶೈಲಿಯಲ್ಲಿ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವ ಬದಲು, ವಾಸ್ತವ ಸತ್ಯಗಳನ್ನು ತಿಳಿದುಕೊಂಡು ಯೋಜನೆಗಳನ್ನು ರೂಪಿಸಬೇಕು. ಜನರ ಮೇಲೆ ಸ್ವಲ್ಪ ಮನುಷ್ಯತ್ವ ಇರಲಿ, ಜನರು ಲಾಕ್ ಡೌನ್, ಕೊರೊನಾ ವೈರಸ್ ಸಂಕಷ್ಟ ಮೊದಲಾದವುಗಳಿಂದ ಜರ್ಜರಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪಡಿತರ ಕೊಡುವುದಿಲ್ಲ, ದಂಡ ಹಾಕ್ತಿವಿ ಎಂಬಂತ ಹೇಳಿಕೆ ನೀಡಿ ಜನರನ್ನು ಆತಂಕಕ್ಕೆ ದೂಡುವುದು ಯಾವ ನ್ಯಾಯ? ಯಡಿಯೂರಪ್ಪ ಸರ್ಕಾರ ಬಡವರಿಗೆ ಸ್ವಂತವಾಗಿ ಏನನ್ನೂ ನೀಡದಿದ್ದರೂ ಪರವಾಗಿಲ್ಲ. ಇರುವ ಸೌಲಭ್ಯಗಳನ್ನು ಕಸಿದುಕೊಳ್ಳದಿರಲಿ ಎಂದು ಜನರು ಹೇಳುತ್ತಿದ್ದಾರೆ.

 

ಇತ್ತೀಚಿನ ಸುದ್ದಿ