ಸರಕಾರಗಳು ಅಂಬೇಡ್ಕರ್ ರ  ಸಂವಿಧಾನದ ಆಶಯಗಳನ್ನು ಈಡೇರಿಸದಿರುವುದು ಪ್ರಜಾಪ್ರಭುತ್ವದ ಅಣಕ:  ಎಂ. ದೇವದಾಸ್ - Mahanayaka
12:45 PM Saturday 7 - September 2024

ಸರಕಾರಗಳು ಅಂಬೇಡ್ಕರ್ ರ  ಸಂವಿಧಾನದ ಆಶಯಗಳನ್ನು ಈಡೇರಿಸದಿರುವುದು ಪ್ರಜಾಪ್ರಭುತ್ವದ ಅಣಕ:  ಎಂ. ದೇವದಾಸ್

ambedkar parinibbana
06/12/2023

 

  • ಡಾ.ಬಿ. ಆರ್. ಅಂಬೇಡ್ಕರ್ ರವರ 67ನೇ ಪರಿನಿಬ್ಬಾಣ ದಿನ
  • ಸಂವಿಧಾನ ಸಂರಕ್ಷಣಾ ಸಂಕಲ್ಪ ದಿನ

ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ )ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ. ದ. ಕ. ಜಿಲ್ಲಾ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ. ಆರ್. ಅಂಬೇಡ್ಕರ್ ರವರ 67ನೇ ಪರಿನಿಬ್ಬಾಣ ದಿನವನ್ನು “ಸಂವಿಧಾನ ಸಂರಕ್ಷಣಾ ಸಂಕಲ್ಪ ದಿನ “ವನ್ನಾಗಿ ಮಂಗಳೂರಿನ ಡಿ. ಗ್ರೂಪ್ ನೌಕರರ ಭವನದಲ್ಲಿ ನಡೆಸಲಾಯಿತು.

ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ದ. ಸಂ. ಸ. ರಾಜ್ಯ ಸಂಘಟನಾ ಸಂಚಾಲಕರಾದ ಎಂ. ದೇವದಾಸ್ ರವರು “ಅಂಬೇಡ್ಕರ್ ರವರು ತನ್ನ ಬಾಲ್ಯದಿಂದಲೇ ಮನುವಾದಿ ವ್ಯವಸ್ಥೆಯ ಅಸಮಾನತೆಯ ಕರಿನೆರಳಿನಲ್ಲಿ ನಾನಾ ಬಗೆಯ ದಬ್ಬಾಳಿಕೆ, ದೌರ್ಜನ್ಯಗಳನ್ನು ತನ್ನ ಜೀವಮಾನವಿಡೀ ಅನುಭವಿಸಿ ಅದರ ವಿರುದ್ಧ ಸೆಟೆದು ನಿಂತು, ಅಂತಿಮವಾಗಿ ಎಲ್ಲರಿಗೂ ಸಮಾನತೆಯನ್ನು ನೀಡುವಂತಹ ಲಿಖಿತ ಸಂವಿಧಾನವನ್ನು ಬರೆಯುವ ಮೂಲಕ ಈ ದೇಶದ ಶೋಷಿತ ಸಮುದಾಯದ ಕೋಟ್ಯಂತರ ಜನರಿಗೆ ಸಾಮಾಜಿಕ ಅಸಮಾನತೆಯಿಂದ ವಿಮೋಚನೆಯ ದಾರಿಯನ್ನು ಕಾನೂನು ಬದ್ಧವಾಗಿ ಕಲ್ಪಿಸಿದರು. ಆದರೆ ನಮ್ಮನ್ನು ಆಳಿದ ಯಾವುದೇ ಸರಕಾರಗಳು ಅಂಬೇಡ್ಕರ್ ರವರ ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ಕನಿಷ್ಟ ಪ್ರಯತ್ನವನ್ನು ಮಾಡದಿರುವುದು ಪ್ರಜಾತಂತ್ರ ವ್ಯವಸ್ಥೆಯ ಅಣಕ. ಅದರಲ್ಲೂ ಕೇಂದ್ರದಲ್ಲಿ ಅಧಿಕಾರ ಹಿಡಿದ ಮೋದಿ ನೇತೃತ್ವದ ಬಿ. ಜೆ ಪಿ. ಸರಕಾರ ಸಂವಿಧಾನದ ಮೂಲ ಆಶಯಗಳನ್ನೇ ಬುಡಮೇಲು ಮಾಡಲು ಹೊರಟಿದ್ದು, ಸಂವಿಧಾನದ ಆಳ ಅಗಲಗಳನ್ನು ನಾವೆಲ್ಲಾ ಸರಿಯಾಗಿ ಅರಿತು ಸಂವಿಧಾನ ಸಂರಕ್ಷಣಾ ಸಂಕಲ್ಪವನ್ನು ಮಾಡಬೇಕಾಗಿದೆ ಎಂದರು.


Provided by

ಕಾರ್ಯಕ್ರಮದಲ್ಲಿ ವಿಚಾರ ಮಂಡನೆ ನಡೆಸಿದ ಭೀಮ್ ಆರ್ಮಿ ರಾಜ್ಯ ಉಪಾಧ್ಯಕ್ಷ ಜಯಕುಮಾರ್ ಹಾದಿಗೆ ಯವರು ” ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ಅಂಬೇಡ್ಕರ್ ರವರ ಭಾವಚಿತ್ರವನ್ನು ಹೊತ್ತು ಮೆರವಣಿಗೆ ಮಾಡುವ ಬದಲು ಅವರ ಬರಹ, ಭಾಷಣಗಳನ್ನು ಅರಿಯಬೇಕಾಗಿದೆ. ಅವರ  ಪುತ್ತಳಿಯನ್ನು ಪೂಜಿಸುವ ಬದಲು ಅವರ ಪುಸ್ತಕಗಳನ್ನು ಇನ್ನಷ್ಟು ಓದಿ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳನ್ನು  ತಿಳಿಯಬೇಕಾಗಿದೆ. ಈ ಸಾಮಾಜಿಕ ಪರಿವರ್ತನಕಾರರ ವಿಚಾರಧಾರೆಗಳನ್ನು ಯುವ ಸಮುದಾಯಗಳು ಅರಿಯದೆ ಮನುವಾದಿ ವ್ಯವಸ್ಥೆಯ ಕುತಂತ್ರಗಳಿಗೆ ಬಲಿಯಾಗುತ್ತಿರುವುದು ಅಂಬೇಡ್ಕರ್ ಚಿಂತನೆಗೆ ದೊಡ್ಡ ಸವಾಲಾಗಿದೆ. ನಾವು ನಮ್ಮೊಳಗಿನ ಸ್ವಾರ್ಥ ಮನೋಭಾವವನ್ನು ಬಿಟ್ಟು ಸಮುದಾಯದ ಹಿತದೃಷ್ಟಿಯಿಂದ ಒಂದಾಗಿ ಸಂಘಟಿತವಾಗಿ ಕೆಲಸ ಮಾಡಿದರೆ ಖಂಡಿತವಾಗಿಯೂ ಈ ಸವಾಲನ್ನು ಮೆಟ್ಟಿ ಭೀಮ ಭಾರತವನ್ನು ಕಟ್ಟುವ ಮೂಲಕ ಸಂವಿಧಾನದ ಸಂರಕ್ಷಣೆಯನ್ನು ಮಾಡಬಹುದಾಗಿದೆ ಎಂದರು.

ಕಾರ್ಯಕ್ರಮದ ವೇದಿಕೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕರಾದ ರಘು. ಕೆ. ಎಕ್ಕಾರು ವಹಿಸಿದ್ದರು. ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ತಾಲೂಕು ಸಂಘಟನಾ ಸಂಚಾಲಕ ರುಕ್ಕಯ್ಯ ಅಮೀನ್, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಸೀತಾರಾಮ ಕೋಡಿಕಲ್, ರುಕ್ಕಯ್ಯ ಕೋಟ್ಯಾನ್, ಉಪಸ್ಥಿತರಿದ್ದರು.

ಲಕ್ಷ್ಮಣ್ ಕಾಂಚನ್ ಹಾಗೂ ಸಂಗಡಿಗರು ಕ್ರಾಂತಿಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ನಾಗೇಶ್ ಚಿಲಿಂಬಿ, ಗಿರಿಜಾ ನಾಗೇಶ್, ಬಾಲು ಕುಂದರ್, ರಾಕೇಶ್ ಕರಂಬಾರ್, ರಾಜಯ್ಯ ಮಂಗಳೂರು, ದೊಂಬಯ್ಯ ಕಟೀಲು, ಸುರೇಶ್ ಬೆಳ್ಳಾಯರ್, ಮಂಜಪ್ಪ ಪುತ್ರನ್, ರಾಮರಾಯ ಕೋಡಿಕಲ್ ಮುಂತಾದವರು ಭಾಗವಹಿಸಿದ್ದರು. ಕಮಲಾಕ್ಷ ಬಜಾಲ್ ಸ್ವಾಗತಿಸಿ, ರವಿ ಪೇಜಾವರ ಧನ್ಯವಾದ ಸಮರ್ಪಿಸಿದರು.

ಇತ್ತೀಚಿನ ಸುದ್ದಿ