ಇಸ್ರೇಲ್ ನ ದಾಳಿ ತಡೆಯಲು ಪಾಕಿಸ್ತಾನದ ಸಹಾಯ ಕೋರಿದ ಹಮಾಸ್ ನಾಯಕ
ಹಿರಿಯ ಹಮಾಸ್ ನಾಯಕ ಮತ್ತು ಬಂಡುಕೋರರ ಗುಂಪಿನ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರು ಇಸ್ರೇಲ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಪಾಕಿಸ್ತಾನದ ಸಹಾಯವನ್ನು ಕೋರಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನವನ್ನು “ಧೈರ್ಯಶಾಲಿ” ಎಂದು ಕರೆದ ಅವರು, ಇಸ್ರೇಲ್ “ಪಾಕಿಸ್ತಾನದಿಂದ ಪ್ರತಿರೋಧವನ್ನು ಎದುರಿಸಿದರೆ, ಕ್ರೌರ್ಯವನ್ನು ನಿಲ್ಲಿಸಬಹುದು” ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ.
ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆದ ‘ಅಲ್-ಅಕ್ಸಾ ಮಸೀದಿಯ ಪಾವಿತ್ರ್ಯತೆ ಮತ್ತು ಮುಸ್ಲಿಂ ಉಮ್ಮತ್ ನ ಜವಾಬ್ದಾರಿ’ ಕುರಿತ ರಾಷ್ಟ್ರೀಯ ಸಂವಾದವನ್ನುದ್ದೇಶಿಸಿ ಮಾತನಾಡಿದ ಹನಿಯೆಹ್ ಈ ಹೇಳಿಕೆ ನೀಡಿದ್ದಾರೆ.
ಹಮಾಸ್ ಗೆ ಪಾಕಿಸ್ತಾನದ ಬೆಂಬಲದ ಬಗ್ಗೆ ಭರವಸೆ ವ್ಯಕ್ತಪಡಿಸಿದ ಹನಿಯೆಹ್, ದೇಶವನ್ನು “ಮುಜಾಹಿದ್ದೀನ್ (ಇಸ್ಲಾಂಗಾಗಿ ಹೋರಾಡುವ ಜನರ ಭೂಮಿ) ಎಂದು ಕರೆದರು.
ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಪ್ಯಾಲೆಸ್ಟೀನಿಯನ್ನರು ಮಾಡಿದ ತ್ಯಾಗವನ್ನು ಒತ್ತಿಹೇಳುತ್ತಾ, ಪಾಕಿಸ್ತಾನದ ಶಕ್ತಿಯು ಸಂಘರ್ಷವನ್ನು ನಿಲ್ಲಿಸಬಹುದು ಎಂದು ಹನಿಯೆ ಹೇಳಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.