ದುರಂತ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಕೇರಳದ ವೈದ್ಯೆ ಆತ್ಮಹತ್ಯೆ
ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಮಹಿಳಾ ವೈದ್ಯೆಯ ಆತ್ಮಹತ್ಯೆಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ವರದಕ್ಷಿಣೆ ಬೇಡಿಕೆಯಿಂದಾಗಿ 26 ವರ್ಷದ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಪಿಜಿ ವಿದ್ಯಾರ್ಥಿನಿಯಾಗಿದ್ದ ಶಹಾನಾ ಮಂಗಳವಾರ ಬೆಳಿಗ್ಗೆ ಸಂಸ್ಥೆಯ ಬಳಿಯ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಪಿಜಿ ವೈದ್ಯೆ ಆಗಿದ್ದ ಈಕೆಯ ಸ್ನೇಹಿತನ ವರದಕ್ಷಿಣೆ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ.
ಸ್ನೇಹಿತನ ಕುಟುಂಬವು ಚಿನ್ನ, ಭೂಮಿ ಮತ್ತು ಬಿಎಂಡಬ್ಲ್ಯು ಕಾರಿನ ರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಶಹಾನಾ ಅವರ ಕುಟುಂಬವು ಈ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ನೇಹಿತ ಸಂಬಂಧ ಬೇಡ ಎಂದು ತಿರಸ್ಕರಿಸಿದ್ದ ಎನ್ನಲಾಗಿದೆ.
ಈ ಮಧ್ಯೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆಯ ತಂದೆ ಇತ್ತೀಚೆಗೆ ನಿಧನರಾಗಿದ್ದರು. ವೈದ್ಯಕೀಯ ಕಾಲೇಜಿನಲ್ಲಿ ನಡೆದ ಮರಣೋತ್ತರ ಪರೀಕ್ಷೆ ವೇಳೆ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ.
ಶಹಾನಾ ಅವರ ತಾಯಿಯನ್ನು ಅವರ ಮನೆಯಲ್ಲಿ ಭೇಟಿ ಮಾಡಿದ ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ನ್ಯಾಯವಾದಿ ಸತಿದೇವಿ, ಈ ವಿಷಯದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಮಹಿಳಾ ಆಯೋಗವು ಪೊಲೀಸರಿಂದ ವರದಿ ಕೇಳಲಿದೆ.
ವರನ ಕುಟುಂಬವು ವರದಕ್ಷಿಣೆಗೆ ಬೇಡಿಕೆ ಇಟ್ಟರೆ, ಅವರ ವಿರುದ್ಧ ವರದಕ್ಷಿಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಸತಿದೇವಿ ಹೇಳಿದರು.
ಈ ಸಂಬಂಧ ಮಾಧ್ಯಮ ವರದಿಗಳ ಆಧಾರದ ಮೇಲೆ ರಾಜ್ಯ ಅಲ್ಪಸಂಖ್ಯಾತ ಆಯೋಗವು ತನ್ನದೇ ಆದ ಪ್ರಕರಣವನ್ನು ಪ್ರಾರಂಭಿಸಿತು.