ಹಿಂದೂತ್ವದ ಅಜೆಂಡಾ ವಿಫಲ: ಹೊಸ ರಾಜಕೀಯ ತಂತ್ರ ಹೆಣೆಯುತ್ತಾ ಬಿಜೆಪಿ? - Mahanayaka

ಹಿಂದೂತ್ವದ ಅಜೆಂಡಾ ವಿಫಲ: ಹೊಸ ರಾಜಕೀಯ ತಂತ್ರ ಹೆಣೆಯುತ್ತಾ ಬಿಜೆಪಿ?

bjp
26/12/2023

ಹಿಂದೂತ್ವ ಹೆಸರಿನ ಹೋರಾಟಗಳು ಒಂದು ಕಾಲದಲ್ಲಿ ಬಿಜೆಪಿಗೆ ಗೆಲುವಿನ ಏಣಿಯಾಗಿ ಪರಿಣಿಮಿಸಿತ್ತು. ಆದ್ರೆ, ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಹಿಂದುತ್ವದ ತಂತ್ರಗಾರಿಕೆ ನಿರಂತರವಾಗಿ ವಿಫಲವಾಗುತ್ತಿರುವುದು ಮಾತ್ರವಲ್ಲದೇ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿರುವುದು ಗಮನ ಸೆಳೆದಿದೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಿಂದುತ್ವದ ಅಜೆಂಡಾ ಮುಗ್ಗರಿಸಿತು. ಬಿಜೆಪಿ ರೂಪಿಸಿದ ಹಿಂದುತ್ವದ ಕಾರ್ಯತಂತ್ರಗಳು ತಿರುಗು ಬಾಣವಾಯ್ತು. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಲ್ಲಲ್ಲಿ ಏಕಾಏಕಿ ಹಿಂದುತ್ವದ ಹೆಸರಿನಲ್ಲಿ ಸ್ವಯಂ ಘೋಷಿತ ನಾಯಕರು ಸೃಷ್ಟಿಯಾದರು. ಹಲಾಲ್‌, ಜಟ್ಕಾ ಹೋರಾಟಗಳು, ಮತಾಂತರದ ವಿಚಾರಗಳು, ಬುರ್ಖಾದ ವಿಚಾರಗಳಲ್ಲಿ ಸಾಕಷ್ಟು ಹೋರಾಟಗಳನ್ನು ನಡೆಸಲಾಯ್ತು. ಒಂದು ಹಂತದಲ್ಲಿ ಇದು ಹೋರಾಟ ಎನ್ನುವುದಕ್ಕಿಂತಲೂ ಅತಿರೇಕ ಎನ್ನುವಂತೆ ಪ್ರದರ್ಶನಗೊಂಡಿತು.

ಇನ್ನೊಂದೆಡೆ ಹಿಂದೂ ಕಾರ್ಯಕರ್ತರ ಹತ್ಯೆ ಮತ್ತು ಬಿಜೆಪಿ ನಾಯಕರ ಮೌನವು ಬಿಜೆಪಿ ವಿರುದ್ಧವೇ ಹಿಂದೂ ಕಾರ್ಯಕರ್ತರು ರೊಚ್ಚಿಗೇಳುವಂತೆ ಮಾಡಿತ್ತು. ಕೊನೆಗೂ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿತು.

ಇದೀಗ ಲೋಕ ಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸರ್ಕಸ್‌ ನಡೆಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅನುಭವಿ ರಾಜಕಾರಣಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಆಯ್ಕೆಯಾಗಿದೆ. ರಾಜ್ಯ ಉಪಾಧ್ಯಕ್ಷರಾಗಿ ಮಾಜಿ ಸಚಿವ ಎನ್.ಮಹೇಶ್‌ ಅವರನ್ನು ಆಯ್ಕೆ ಮಾಡಲಾಗಿದೆ. ವಿಪಕ್ಷ ನಾಯಕರಾಗಿ ಆರ್. ಅಶೋಕ್‌ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನೊಂದೆಡೆ ಬಿಜೆಪಿ ಪಕ್ಷದ ಹೈಕಮಾಂಡ್‌ ಆಯ್ಕೆ ಮಾಡಿರುವ ನೂತನ ಸಾರಥಿಗಳ ವಿರುದ್ಧ ಬಸನ ಗೌಡ ಪಾಟೀಲ್‌ ಯತ್ನಾಳ್‌ ರೊಚ್ಚಿಗೆದ್ದಿದ್ದಾರೆ. ಹಿಂದೂತ್ವದ ಅಜೆಂಡಾವನ್ನು ಮುಂದಿಟ್ಟುಕೊಂಡಿರುವ ಯತ್ನಾಳ್‌  ಅವರು ತಾನೇ ರಾಜ್ಯಾಧ್ಯಕ್ಷ, ತಾನೇ ವಿಪಕ್ಷ ನಾಯಕ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಾ ಗೊಂದಲ ಸೃಷ್ಟಿಸುತ್ತಿರುವುದನ್ನು ಕಾಣಬಹುದಾಗಿದೆ.

ರಾಜ್ಯದಲ್ಲಿ ಯತ್ನಾಳ್‌ ಅವರಿಗೆ ಹೆಚ್ಚಿನ ಜನಪ್ರಿಯತೆ ಇಲ್ಲವಾದರೂ, ಹಿಂದುತ್ವದ ಹೆಸರಿನಲ್ಲಿ ಯತ್ನಾಳ್‌ ತಮ್ಮನ್ನು ಒಬ್ಬ ಪ್ರಭಾವಿ ರಾಜಕಾರಣಿ ಎಂದು ಬಿಂಬಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನಗಳು ಸಾಕಷ್ಟು ಬಾರಿ ನಗೆ ಪಾಟಲಿಗೀಡಾಗಿದೆ. ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯ ಬಿಜೆಪಿಯು ಮಾಜಿ ಸಿಎಂ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಲೋಕ ಸಭಾ ಚುನಾವಣೆ ಗೆಲುವಿಗೆ ಯಂತ್ರ ಹೆಣೆಯುತ್ತಿದ್ದರೆ, ಈ ಪ್ರಯತ್ನಕ್ಕೆ ಯತ್ನಾಳ್‌ ಹಾಗೂ ಹಿಂದುತ್ವ ಹೆಸರಿನಲ್ಲಿ ಜನಪ್ರಿಯತೆ ಪಡೆಯಲು ಯತ್ನಿಸುತ್ತಿರುವ ನಾಯಕರು ತೊಡಕುಗಳಾಗಿ ಪರಿಮಿಸಿದ್ದಾರೆ.

ಕೇವಲ ದ್ವೇಷ ಹರಡುವುದರಿಂದ ಮತಗಳನ್ನು ಗಳಿಸಬಹುದು ಎನ್ನುವುದು ಹಿಂದುತ್ವದ ಆಧಾರದಲ್ಲಿ ತಂತ್ರ ಹೆಣೆಯುತ್ತಿರುವ ನಾಯಕರ ತಂತ್ರವಾಗಿದ್ದರೆ, ಇನ್ನೊಂದೆಡೆ, ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳ ಭರವಸೆಯೊಂದಿಗೆ ಚುನಾವಣೆ ಗೆಲ್ಲಲು ಮುಂದಾಗಿರುವ ಅನುಭವಿ ನಾಯಕರ ತಂತ್ರಗಾರಿಕೆ ಮತ್ತೊಂದೆಡೆಯಲ್ಲಿ ಕಾಣುತ್ತಿದೆ. ಕೇವಲ ಹಿಂದುತ್ವವೊಂದಿದ್ದರೆ ಸಾಲದು, ಎಲ್ಲ ಜಾತಿ, ಧರ್ಮದವರ ಮತಗಳು ಚುನಾವಣೆ ಗೆಲ್ಲಲು ಬೇಕು ಎನ್ನುವ ವಾಸ್ತವ ಅಂಶ ಕಳೆದ ವಿಧಾನ ಸಭಾ ಬಹಿರಂಗವಾಗಿತ್ತು.  ಯತ್ನಾಳ್‌ ಹಾಗೂ ಕೆಲವು ಹಿಂದುತ್ವ ನಾಯಕರು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹಿಂದುತ್ವದ ಭಾವನೆಗಳನ್ನು ರೊಚ್ಚಿಗೆಬ್ಬಿಸಲು ಯತ್ನಿಸುತ್ತಿದ್ದಾರೆ. ಆದ್ರೆ, ಬಿಜೆಪಿ ಹೈಕಮಾಂಡ್‌ ಕಳೆದ ವಿಧಾನ ಸಭಾ ಚುನಾವಣೆಯ ಫಲಿತಾಂಶದಿಂದ ಪಾಠ ಕಲಿತಿದ್ದು, ಹೀಗಾಗಿ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ನೇತೃತ್ವವನ್ನು ಬಿಜೆಪಿಗೆ ನೀಡಿದ್ದಾರೆ. ಈ ಮೂಲಕ ಬಿಜೆಪಿ ಜನಪರವಾದ ಆಲೋಚನೆಗಳಿಗೆ ಹೆಚ್ಚಿನ ತಂತ್ರಗಾರಿಕೆಯನ್ನು ಲೋಕಸಭೆಯಲ್ಲಿ ಜಾರಿಗೊಳಿಸುವ ಸಾಧ್ಯತೆಗಳು ಕಂಡು ಬಂದಿದೆ. ಜೊತೆಗೆ ಉಪಾಧ್ಯಕ್ಷರಾಗಿ ಎನ್.ಮಹೇಶ್‌ ಅವರ ಆಯ್ಕೆ ಬಿಜೆಪಿಯ ತಂತ್ರಗಾರಿಕೆಗೆ ಇನ್ನಷ್ಟು ಬಲ ತಂದುಕೊಡಲಿದೆ ಎನ್ನುವ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.

ಇತ್ತೀಚಿನ ಸುದ್ದಿ