ಕನ್ನಡ ಉಳಿಸಲು ಬ್ಯಾನರ್ ಹರಿಯುವ ಬದಲು ಮುಚ್ಚಿರುವ ಸರ್ಕಾರಿ ಶಾಲೆಗಳ ಬಾಗಿಲು ತೆರೆಯಬೇಕಿದೆ!
ಬೆಂಗಳೂರಿನಲ್ಲಿ ಕನ್ನಡ ಬಳಕೆಯ ವಿಚಾರದಲ್ಲಿ ಸಾಕಷ್ಟು ಹೋರಾಟಗಳು ಆರಂಭವಾಗಿದೆ. ಫೆಬ್ರವರಿ 28ರೊಳಗೆ ವಾಣಿಜ್ಯ ಮಳಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕು, ಇಲ್ಲವಾದರೆ ವ್ಯಾಪಾರ ಪರವಾನಗಿ ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ.
ಸರ್ಕಾರದ ಈ ಘೋಷಣೆಯ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳು ರಸ್ತೆಗಿಳಿದು, ಕನ್ನಡ ನಾಮಫಲಕಗಳ ಅಳವಡಿಕೆಯ ವಿಚಾರದಲ್ಲಿ ವಿವಿಧೆಡೆಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿರುವ ಬ್ಯಾನರ್ ಗಳು, ನಾಮಫಲಕಗಳನ್ನು ಧ್ವಂಸಗೊಳಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ. ಇನ್ನು ಕೆಲವೆಡೆಗಳಲ್ಲಿ ಮಾಲ್ ಗಳಿಗೆ ತೆರಳಿ ಕನ್ನಡ ಪರ ಹೋರಾಟಗಾರರು ಶಾಪ್ ಗಳ ಮಾಲಿಕರಿಗೆ ತುಂಬಾ ಒರಟು ಭಾಷೆಯಲ್ಲಿ ಎಚ್ಚರಿಕೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿವೆ.
ಈ ಎಲ್ಲ ವಿದ್ಯಮಾನಗಳ ನಡುವೆಯೇ ಕೆಲವೊಂದು ಪ್ರಶ್ನೆಗಳು ಕೇಳಿ ಬಂದಿವೆ. ಕರ್ನಾಟಕದಲ್ಲಿ ಕನ್ನಡ ಭಾಷೆಯ ನಾಮಫಲಕಗಳನ್ನು ಹಾಕಲು ಸರ್ಕಾರ ನೀಡಿರುವ ಸೂಚನೆ ಸ್ವಾಗತಾರ್ಹವಾದದ್ದು, ಆದರೆ ಕನ್ನಡ ಶಾಲೆಗಳನ್ನು ಮುಚ್ಚಿ, ಬ್ಯಾನರ್ ತೆರವು ಹೋರಾಟಗಳನ್ನು ಮಾಡಿದರೆ, ಕನ್ನಡವನ್ನು ಉಳಿಸಿದಂತಾಗುತ್ತದೆಯೇ? ಎನ್ನುವ ಪ್ರಶ್ನೆಗಳಿಗೆ ಕನ್ನಡ ಪರ ಸಂಘಟನೆಗಳು ಹಾಗೂ ಸರ್ಕಾರ ಉತ್ತರಿಸಬೇಕಿದೆ.
ಕನ್ನಡ ಶಾಲೆಗಳನ್ನು ದೆಹಲಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಬೇಕಿದೆ. ಕನ್ನಡ ಶಾಲೆಯ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಸರ್ಕಾರ ಒತ್ತು ನೀಡಬೇಕಿದೆ. ರಾಜ್ಯದಲ್ಲಿ ಮುಚ್ಚಲ್ಪಟ್ಟಿರುವ ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರ ಮತ್ತೊಮ್ಮೆ ಅಧ್ಯಯನ ನಡೆಸಬೇಕಿದೆ. ಕನ್ನಡ ಉಳಿಸಲು ಬ್ಯಾನರ್ ಹರಿಯುವ ಬದಲು ಕನ್ನಡ ಶಾಲೆಗಳನ್ನು ತೆರೆಯಲು ಹೋರಾಟಗಾರರು ಮುಂದಾಗಬೇಕಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಸರ್ಕಾರಿ ಶಾಲೆಗಳಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಉತ್ತಮ ಗುಣಮಟ್ಟದ ಶಾಲೆಯಾಗಿ ಮಾರ್ಪಡಿಸಿದರೆ, ಇಂಗ್ಲಿಷ್ ಮೀಡಿಯಮ್ ಶಾಲೆಗಳಿಗಿಂತಲೂ ಉತ್ತಮ ಶಿಕ್ಷಣವನ್ನು ಮಕ್ಕಳು ಕನ್ನಡದಲ್ಲೇ ಪಡೆಯಲು ಸಾಧ್ಯವಿದೆ. ಹೋರಾಟಗಳು ಕೇವಲ ಪ್ರಚಾರಗಳಿಗೆ ಸೀಮಿತವಾಗದೇ, ನಿಜವಾಗಿಯೂ ಕನ್ನಡದ ಅಭಿವೃದ್ಧಿಗೆ ಬಳಕೆಯಾಗಲಿ. ಅಂದ ಹಾಗೆ ಸಂಘಟನೆಗಳು ಮಾಲ್ ಗಳಿಗೆ ನುಗ್ಗಿ ಎಚ್ಚರಿಕೆ ನೀಡುವುದು, ಬೆದರಿಕೆ ಹಾಕುವ ಬದಲು ಸರ್ಕಾರವೇ ಬ್ಯಾನರ್ ಗಳನ್ನು ತೆರವುಗಳಿಸುವ ಕೆಲಸವನ್ನು ಮಾಡಲಿ ಎನ್ನುವ ಒತ್ತಾಯಗಳೂ ಕೇಳಿ ಬಂದಿವೆ.