ಕನ್ನಡ ಹೋರಾಟದ ಹೆಸರಿನಲ್ಲಿ ರೌಡಿಸಂಗೆ ಅವಕಾಶ ನೀಡಬೇಕೆ?
ಲೋಕ ಸಭಾ ಚುನಾವಣೆ ಆರಂಭವಾಗ್ತಿದೆ. ಹೀಗಾಗಿ ನಾಯಕತ್ವವನ್ನು ಬಿಂಬಿಸುವ ಹೋರಾಟಗಳು ಆರಂಭವಾಗಿದೆ. ವಿಧಾನ ಸಭಾ ಚುನಾವಣೆ ಮುಗಿದ ಬಳಿಕ ಈವರೆಗೆ ತಟಸ್ಥವಾಗಿದ್ದ ಸಂಘಟನೆಗಳ ನಾಯಕರು ವಿವಿಧ ಪಕ್ಷದ ನಾಯಕರನ್ನು ತಮ್ಮತ್ತ ಸೆಳೆಯುವ ತಂತ್ರ ಆರಂಭವಾಗಿದೆ. ಈ ನಡುವೆ ಬೆಂಗಳೂರಿನಲ್ಲಿ ಕನ್ನಡ ಫಲಕಗಳ ವಿಚಾರದಲ್ಲಿ ಭಾರೀ ರೌಡಿಸಂ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಹೌದು..! ಯಾವುದೇ ಸಂಘಟನೆಗಳಿಗೆ ಹೋರಾಟ ಮಾಡುವ ಅವಕಾಶ ಸಂವಿಧಾನದಲ್ಲಿದೆ. ಆದ್ರೆ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡುವ ಅಧಿಕಾರ ಕಾನೂನಿನಲ್ಲಿಲ್ಲ. ನಿನ್ನೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಿನಲ್ಲಿ ಭಯ ಆತಂಕ ಸೃಷ್ಟಿಸಿತು. ಒಂದು ಹಂತದಲ್ಲಿ ಇದು ಹೋರಾಟವೇ? ಪುಂಡಾಟವೇ ಎನ್ನುವ ಅನುಮಾನಗಳನ್ನು ಸೃಷ್ಟಿ ಮಾಡುವಂತಿತ್ತು.
ಕನ್ನಡ ಫಲಕಗಳನ್ನು ಅಳವಡಿಸಲು ಕರೆ ನೀಡುವುದು ಮತ್ತು ಅದರ ಅಗತ್ಯ ಏನು ಎನ್ನುವುದನ್ನು ಅಂಗಡಿ ಮಳಿಗೆಗಳ ಮಾಲಿಕರಿಗೆ ತಿಳಿಸುವ ಪ್ರಯತ್ನ ನಡೆಯಬೇಕಿತ್ತು. ಆದ್ರೆ ಕನ್ನಡದ ಹೆಸರಿನಲ್ಲಿ ಬೋರ್ಡ್ ಗಳಿಗೆ ಕಲ್ಲೆಸೆದು ಹಾನಿ ಮಾಡುವವರನ್ನು ಹೋರಾಟಗಾರರು ಅಂತ ಕರೆಯುವುದಾದರೂ ಹೇಗೆ ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.
ಸರ್ಕಾರ ಇಂತಹ ಪುಂಡಾಟಗಳಿಗೆ ಪ್ರೋತ್ಸಾಹ ನೀಡಬಾರದು. ಈಗಾಗಲೇ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು ಬಂಧಿಸಿ, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಜ್ಯ ಸರ್ಕಾರದ ಈ ಕ್ರಮ ಸರಿಯಾಗಿದೆ. ಅಂಗಡಿ ಮುಂಗಟ್ಟುಗಳ ಇಂಗ್ಲಿಷ್ ಭಾಷೆಗಳ ಬೋರ್ಡ್ ಗಳನ್ನು ಸರ್ಕಾರವೇ ಕಾನೂನು ಪ್ರಕಾರ ತೆರವುಗೊಳಿಸಲಿ, ಯಾವುದೇ ಸಂಘಟನೆಗಳಿಗೆ ಕಾನೂನು ಕೈಗೆತ್ತಿಕೊಳ್ಳುವ ಅವಕಾಶ ನೀಡದಿರಲಿ ಎನ್ನುವ ಮಾತುಗಳು ಕೇಳಿ ಬಂದಿವೆ.
ಇನ್ನೂ ಈ ಬಗ್ಗೆ ಕನ್ನಡ ಹೋರಾಟಗಾರರಿಗೆ ಗೃಹ ಸಚಿವರು ಕಿವಿಮಾತು ಹೇಳಿದ್ದಾರೆ. ನಮ್ಮ ಸರ್ಕಾರ ಕನ್ನಡ ಪರವಾಗಿ, ಕನ್ನಡ ರಕ್ಷಣೆ ಮಾಡುವ ವಿಚಾರದಲ್ಲಿ, ಕನ್ನಡ ಯೋಜನೆಗಳು, ಕಾರ್ಯಕ್ರಮಗಳು, ಭಾಷಾವಾರು ಕನ್ನಡಪರ ತೀರ್ಮಾನಗಳನ್ನು ತೆಗೆದುಕೊಳ್ಳಲು ಜನಪರವಾಗಿದೆ. ಬೆಂಗಳೂರು ನಗರ ಮತ್ತು ಇಲ್ಲಿನ ಜನತೆ ದೇಶಕ್ಕೆ, ಹೊರದೇಶಗಳ ನಾಗರಿಕರಿಗೆ ಮಾದರಿಯಾಗಬೇಕು. ಹೋರಾಟ ಗಲಾಟೆಗೆ ಕಾರಣವಾಗಬಾರದು, ನಮ್ಮ ಬಗ್ಗೆ ನಮಗೆ ಹೆಮ್ಮೆಯಿರಬೇಕು. ಜನತೆಗೆ ಉತ್ತಮ ಸಂದೇಶ ನೀಡಬೇಕು ಎಂದಿದ್ದಾರೆ.
ಯಾವುದೇ ವ್ಯಾಪಾರಸ್ಥರು ತಮ್ಮದೇ ಹಣದಲ್ಲಿ ತೆರಿಗೆ ಪಾವತಿಸಿ ಅಂಗಡಿ ಮಳಿಗೆಗಳನ್ನು ತೆರೆದಿರುತ್ತಾರೆ. ಕನ್ನಡದ ಹೆಸರು ಹೇಳಿಕೊಂಡು ಏಕಾಏಕಿ ಅಂಗಡಿ ಮಳಿಗೆಗಳಿಗೆ ನುಗ್ಗಿ ದಾಂಧಲೆ ನಡೆಸಿ ಕಲ್ಲು ತೂರಾಟ ನಡೆಸಿ ಅದನ್ನು ಯಾರೋ ನಾಶ ಮಾಡುವುದೆಂದರೆ, ಅದಕ್ಕೊಂದು ಅರ್ಥ ಇದೆಯೇ? ಹೋರಾಟಕ್ಕೂ ರೌಡಿಸಂಗೂ ವ್ಯತ್ಯಾಸ ಇದೆ. ಇಂಗ್ಲಿಷ್ ಬೋರ್ಡ್ ಗಳನ್ನು ಬದಲಿಸಿ ಕನ್ನಡ ಬೋರ್ಡ್ ಅಳವಡಿಸಲು ಮನವಿ ಮಾಡುವುದಕ್ಕೆ ಒಂದು ಅರ್ಥ ಇದೆ. ಆದ್ರೆ ಮಾಲ್ ಗಳ ಮಾಲಿಕರನ್ನು ಕರೆದು ಅವಾಚ್ಯ ಶಬ್ದಗಳಲ್ಲಿ ನಿಂದಿಸಿ, ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ಪ್ರಚಾರ ಪಡೆದುಕೊಳ್ಳುವುದು ಕನ್ನಡ ಹೋರಾಟವಾಗಲು ಸಾಧ್ಯವೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.