ಮದುವೆಗೆ ಒಪ್ಪಿದರೂ ವಿಳಂಬ ಮಾಡಿದ ಪೋಷಕರು: ಮನೆ ಬಿಟ್ಟು ಹೋದ ಯುವಕ-ಯುವತಿ ಶವವಾಗಿ ಪತ್ತೆ
ಕಲಬುರಗಿ: ಪ್ರೀತಿಸಿದವರನ್ನು ಮದುವೆಯಾಗಲು ಬಿಡುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಸಾಮಾನ್ಯವಾಗಿ ಕಾಣಸಿಗುತ್ತದೆ. ಆದರೆ ಇಲ್ಲೊಂದು ಯುವ ಜೋಡಿ, ಮದುವೆ ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮಾನಶಿವನಗಿ ಗ್ರಾಮದ 23 ವರ್ಷ ವಯಸ್ಸಿನ ಪರಶುರಾಮ ಪೂಜಾರಿ ಮತ್ತು 19 ವರ್ಷದ ವಯಸ್ಸಿನ ಭಾಗ್ಯಶ್ರೀ ಪರಸ್ಪರ ಪ್ರೀತಿಸುತ್ತಿದ್ದರು. ಪರಶುರಾಮ ಭಾಗ್ಯಶ್ರೀಯ ಸೋದರತ್ತೆ ಮಗ ಕೂಡ ಆಗಿದ್ದಾನೆ. ಇವರ ಪ್ರೀತಿ ಮನೆಯವರಿಗೂ ತಿಳಿಯಿತು. ಮನೆಯವರು ಕೂಡ ಇವರ ಪ್ರೀತಿಗೆ ಒಪ್ಪಿದರು. ಆದರೆ, ಮದುವೆ ಈಗ ಬೇಡ ಸ್ವಲ ದಿನ ಕಳೆಯಲಿ ಎಂದು ಮನೆಯವರು ಹೇಳಿದ್ದಾರೆ.
ಹೀಗಿರುವಾಗ ಫೆ.11ರಂದು ಪರಶುರಾಮ ಮತ್ತು ಭಾಗ್ಯಶ್ರೀ ನಾಪತ್ತೆಯಾಗಿದ್ದಾರೆ. ನಿನ್ನೆ ಸಂಜೆ ಅಂದರೆ, ಫೆ.15ರಂದು ಸಂಜೆ. ಇಲ್ಲಿನ ಯಡ್ರಾಮಿ ಪಟ್ಟಣದ ಹೊರವಲಯದ ಹಳ್ಳದಲ್ಲಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಇವರಿಬ್ಬರ ಮೃತದೇಹ ಪತ್ತೆಯಾಗಿದೆ.
ಹಿರಿಯರ ಜೊತೆ ಚರ್ಚೆ ಮಾಡಿ ಮತ್ತೆ ಮದುವೆ ಮಾಡಿದರಾಯ್ತು ಎಂದು ಮನೆಯವರು ಉದಾಸೀನ ತೋರಿದ್ದನ್ನು ಕಂಡ ಈ ಜೋಡಿ, ನಮ್ಮನ್ನು ಮನೆಯವರು ದೂರ ಮಾಡಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಅನುಮಾನ ಬಂದಿದೆ. ಹಾಗಾಗಿ ಫೆ.11ರಂದು ಇವರು ಮನೆ ಬಿಟ್ಟು ಹೋಗಿದ್ದರು ಎಂದು ಹೇಳಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಮದುವೆ ವಿಳಂಬ ಮಾಡಿರುವುದರಿಂದ ನೊಂದು ಇವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಮೃತದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಜೋಡಿಯ ಸಾವಿಗೆ ಕಾರಣ ಏನು ಎನ್ನುವುದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಯಡ್ರಾಮಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.