ಊಟದ ನೆಪದಲ್ಲಿ ಕರೆದೊಯ್ದು ಸಹೋದ್ಯೋಗಿ ಮಹಿಳೆ ಮೇಲೆ ಮ್ಯಾನೇಜರ್ ನಿಂದ ಅತ್ಯಾಚಾರ! - Mahanayaka

ಊಟದ ನೆಪದಲ್ಲಿ ಕರೆದೊಯ್ದು ಸಹೋದ್ಯೋಗಿ ಮಹಿಳೆ ಮೇಲೆ ಮ್ಯಾನೇಜರ್ ನಿಂದ ಅತ್ಯಾಚಾರ!

bangalore
06/01/2024

ಬೆಂಗಳೂರು:  ಸಹೋದ್ಯೋಗಿ ಮಹಿಳೆಯನ್ನು ಊಟದ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿ, ಜೀವ ಬೆದರಿಕೆಯೊಡ್ಡಿದ ಘಟನೆಗೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಯೊಂದರ ವ್ಯವಸ್ಥಾಪಕನನ್ನು  ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ಕೆಆರ್ ಪುರಂ ನಿವಾಸಿ ಸೈಯದ್ ಅಕ್ರಮ್ (37)  ಬಂಧಿತ ಆರೋಪಿಯಾಗಿದ್ದಾನೆ. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿತ್ತು. ಸಂತ್ರಸ್ತ ಮಹಿಳೆ ಹಾಗೂ ಅವರ ಪತಿ ಬಸವೇಶ್ವರನಗರದಲ್ಲಿರುವ ಸಂಸ್ಥೆಯಲ್ಲಿ ಟೆಲಿಕಾಲರ್‌ ಗಳಾಗಿ ಕೆಲಸ ಮಾಡುತ್ತಿದ್ದರು.

ಘಟನೆಯ ದಿನ ಆರೋಪಿ ಅಕ್ರಂ ಸಂತ್ರಸ್ತೆಗೆ ಕರೆ ಮಾಡಿ ಆಕೆಯನ್ನು ಹೋಟೆಲ್‌ ಗೆ ಊಟಕ್ಕೆ ಆಹ್ವಾನಿಸಿದ್ದ. ಕಂಪನಿಯ  ಇತರ ಸಹೋದ್ಯೋಗಿಗಳು ಸಹ ಬರುತ್ತಾರೆ ಎಂದು ನಂಬಿಸಿದ್ದ.

ಆ ಬಳಿಕ ಕಚೇರಿ ಬಳಿಯಿಂದ  ಆಕೆಯನ್ನು ತನ್ನ ಬೈಕ್ ನಲ್ಲಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಈ ವೇಳೆ ಆರೋಪಿಯ ಕುಟುಂಬಸ್ಥರು ಯಾರೂ ಮನೆಯಲ್ಲಿರಲಿಲ್ಲ. ನಂತರ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ನವರಂಗ್ ಸರ್ಕಲ್ ಬಳಿ ಆಕೆಯನ್ನು ಬೈಕ್ ನಿಂದ ಇಳಿಸಿದ್ದು, ಅತ್ಯಾಚಾರ ನಡೆಸಿದ ವಿಚಾರವನ್ನು ಯಾರಿಗಾದರೂ ಹೇಳಿದರೆ, ಪರಿಣಾಮ ಭೀಕರವಾಗಿರುತ್ತದೆ ಎಂದು ಸಂತ್ರಸ್ತೆಗೆ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾನೆ.

ಘಟನೆ ಸಂಬಂಧ ಮಂಗಳವಾರ ಮಹಿಳೆ  ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ಕಚೇರಿಗೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.  ವೈದ್ಯಕೀಯ ಪರೀಕ್ಷೆಯ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಇತ್ತೀಚಿನ ಸುದ್ದಿ