ಹೃದಯಾಘಾತ: ಕಲ್ಲಮುಂಡ್ಕೂರು ಗ್ರಾ.ಪಂ. ಸಿಬ್ಬಂದಿ ಚಂದ್ರಹಾಸ್ ನಿಧನ: 30 ವರ್ಷದಲ್ಲೇ ಜೀವನ ಪಯಣ ಮುಗಿಸಿದ ಯುವಕ

06/01/2024
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಚಂದ್ರಹಾಸ್ (30) ಹೃದಯಾಘಾತದಿಂದ ಸಾವನ್ನಪ್ಪಿದವರಾಗಿದ್ದಾರೆ. ಬೆಳಗ್ಗೆ ಕಚೇರಿಗೆ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಅವರಿಗೆ ಹೃದಯಾಘಾತವಾಗಿದೆ. ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರಾದರೂ ಆಸ್ಪತ್ರೆಗೆ ಹೋಗುತ್ತಿದ್ದ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಮೃತರು ಕಲ್ಲಮುಂಡ್ಕೂರು ಗ್ರಾಮದ ಬರ್ಕೆ ಮನೆ ನಿವಾಸಿಯಾಗಿದ್ದು, ಉತ್ಸಾಹಿ ಯುವಕನಾಗಿದ್ದರು. ಎಲ್ಲ ರೀತಿಯ ಕ್ರೀಡೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಉತ್ತಮ ಕ್ರಿಕೆಟ್ ಆಟಗಾರನೂ ಆಗಿದ್ದರು. ಗ್ರಾಮದಲ್ಲಿ ಎಲ್ಲರ ಜೊತೆಗೆ ಅನ್ಯೋನ್ಯತೆಯಿಂದಿದ್ದರು.
ಬಾಳಿ ಬದುಕಬೇಕಿದ್ದ ಯುವಕ ಕೇವಲ 30 ವರ್ಷದಲ್ಲೇ ಹೃದಯಾಘಾತಕ್ಕೆ ಬಲಿಯಾಗಿರುವುದಕ್ಕೆ ಗ್ರಾಮಸ್ಥರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಮೃತರು ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.