ಕುಟುಂಬಕ್ಕೆ ಆಧಾರವಾಗಿದ್ದ ಮೂವರು ಯುವಕರ ದುರಂತ ಸಾವು: ದಿಕ್ಕೇ ತೋಚದೇ ಕಣ್ಣೀರಿಡುತ್ತಿರುವ ಕುಟುಂಬಸ್ಥರು

ಗದಗ: ತಡರಾತ್ರಿ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಬ್ಯಾನರ್ ಕಟ್ಟಲು ಹೋಗಿ 19ರಿಂದ 22 ವರ್ಷದೊಳಗಿನ ಯುವಕರು ಮೂವರು ಯುವಕರು ವಿದ್ಯುತ್ ಪ್ರವಹಿಸಿ ಪ್ರಾಣ ಕಳೆದುಕೊಂಡಿದ್ದಾರೆ.
ಇದೀಗ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ. ಸಾವಿಗೀಡಾದ ಯುವಕರ ಸಾಮೂಹಿಕ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿದೆ.
ಬಡ ಕುಟುಂಬದ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಕುಟುಂಬದ ಜೀವನಕ್ಕೆ ಆಧಾರವಾಗಿದ್ದ ಯುವಕರು ದುರಂತ ಸಾವಿಗೀಡಾಗಿದ್ದು, ಕುಟುಂಬಸ್ಥರು ಕಂಗಾಲಾಗಿದ್ದಾರೆ. ಘಟನೆಯಲ್ಲಿ ಹನಮಂತ ಮಜ್ಜುರಪ್ಪ ಹರಿಜನ (21), ಮುರಳಿ ನೀಲಪ್ಪ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಮೃತಪಟ್ಟಿದ್ದಾರೆ. ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬ ಮೂವರು ಯುವಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ದುರಂತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಶಾಸಕ ಚಂದ್ರು ಲಮಾಣಿ ಅವರು ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಹಾಗೂ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಈ ಘಟನೆ ಸಂಬಂಧ ಗದಗಕ್ಕೆ ಹೋದಾಗ ಕುಟುಂಬಸ್ಥರ ಭೇಟಿಯಾಗಿ ಸಾಂತ್ವನ ಹೇಳುತ್ತೇನೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಘಟನೆ ಸಂಬಂಧ ಜಿಲ್ಲಾಧಿಕಾರಿ, ಎಸ್ಪಿಯಿಂದಲೇ ಮಾಹಿತಿ ಪಡೆದುಕೊಂಡಿದ್ದೇನೆ. ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದರು.