ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ: ಯುವಕನ ದಾರುಣ ಸಾವು

08/01/2024
ಪಡುಬಿದ್ರಿ: ದ್ವಿಚಕ್ರ ವಾಹನವೊಂದಕ್ಕೆ ಬಸ್ ಡಿಕ್ಕಿಯಾದ ಪರಿಣಾಮ 17 ವರ್ಷ ವಯಸ್ಸಿನ ಯುವಕನೋರ್ವ ಸಾವನ್ನಪ್ಪಿದ ದಾರುಣ ಘಟನೆ ಪಡುಬಿದ್ರಿ ಸರ್ಕಲ್ ನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಪಲಿಮಾರು ದರ್ಖಾಸ್ ನಿವಾಸಿ ಧನ್ ರಾಜ್ ಮೃತಪಟ್ಟ ಯುವಕನಾಗಿದ್ದಾನೆ. ಪಲಿಮಾರ್ ನಿಂದ ಎರ್ಮಾಳಿನ ಪೂಂದಾಡು ಎಂಬಲ್ಲಿಗೆ ನಾಟಕ ನೋಡಲು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಧನ್ ರಾಜ್ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದು, ಕಾರ್ಕಳ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ವೇಳೆ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಏಕಾಏಕಿ ಡಿಕ್ಕಿ ಹೊಡೆದಿದೆ.
ಬೈಕ್ ನಲ್ಲಿದ್ದ ಮತ್ತೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಧನ್ ರಾಜ್ ನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಘಟನೆ ಸಂಬಂಧ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.