ಅನ್ನಭಾಗ್ಯದ ಅಕ್ಕಿಯಲ್ಲಿ ಮಂತ್ರಾಕ್ಷತೆ: ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ!

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಅಕ್ಕಿಯಲ್ಲಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರು ಮಂತ್ರಾಕ್ಷತೆ ಹಂಚುತಿದ್ದಾರೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್, ಅನ್ನಭಾಗ್ಯ ಯೋಜನೆಯಡಿ ಕೇಂದ್ರದಿಂದ 5 ಕೆಜಿ ಅಕ್ಕಿ ವಿತರಣೆಯಾಗುತ್ತಿದೆ ಎಂಬುದನ್ನು ಶಿವಕುಮಾರ್ ಮರೆತಿರಬಹುದು. ಹಾಗಾಗಿ ಅಕ್ಕಿ ವಿತರಿಸಿದ ಸಂಪೂರ್ಣ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲಬೇಕು ಎಂದು ಹೇಳಿದ್ದಾರೆ.
ಇನ್ನೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿ, ಡಿಬಿಟಿ ವ್ಯವಸ್ಥೆ ಮೂಲಕ 5 ಕೆಜಿ ಅಕ್ಕಿಗೆ ನಗದು ಜಮಾ ಮಾಡುವುದಾಗಿ ಘೋಷಿಸಿರುವ ಕಾಂಗ್ರೆಸ್ ಸರ್ಕಾರ ಒಂದು ಕಾಳು ಅಕ್ಕಿ ನೀಡುತ್ತಿಲ್ಲ ಎಂಬುದು ನಿಸ್ಸಂದೇಹವಾಗಿ ಇದರಿಂದ ಸಾಬೀತಾಗಿದೆ, ಉಳಿದ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ವಿತರಿಸುತ್ತಿದೆ ಎಂಬುದನ್ನು ಆಡಳಿತಾರೂಢ ಕಾಂಗ್ರೆಸ್ ಸರ್ಕಾರವೇ ಇದನ್ನು ಘೋಷಣೆ ಮಾಡಿದೆ. ಹಾಗಾಗಿ, ರಾಜ್ಯದ ಅಕ್ಕಿಯನ್ನು ದುರುಪಯೋಗಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಉಪಮುಖ್ಯಮಂತ್ರಿಗಳು ತಮ್ಮನ್ನು ರಾಮಭಕ್ತ ಅಂತ ಕರೆದುಕೊಳ್ಳುತ್ತಿರುವುದು ಹಾಗೂ ವಿಶೇಷ ಪೂಜೆಗೆ ವ್ಯವಸ್ಥೆ ಮಾಡುತ್ತಿರುವ ಸರ್ಕಾರ ಶ್ರೀರಾಮನ ಮುಂದೆ ಶರಣಾಗಿದಂತಾಗಿದೆ ಎಂದು ಕರೆಯಬಹುದು ಎಂದು ಹೇಳಿದರು.