8 ತಿಂಗಳ ಹಿಂದೆ ವಿವಾಹವಾಗಿದ್ದ ಯುವತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಶಿವಮೊಗ್ಗ: 8 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವತಿಯೊಬ್ಬರ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತೀರ್ಥಹಳ್ಳಿ ತಾಲೂಕು ನಾಲೂರು ಕೊಳಿಗೆ ಸಮೀಪದ ದಾಸನಕೊಡಿಗೆಯಲ್ಲಿ ನಡೆದಿದೆ.
ಶಮಿತಾ(24) ಮೃತಪಟ್ಟ ಯುವತಿಯಾಗಿದ್ದಾಳೆ. ಶಮಿತಾ ಅವರ ಪತಿ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಪಾಳಿ ಕೆಲಸಕ್ಕೆಂದು ಅವರು ಘಟನೆ ನಡೆದ ದಿನ ಮನೆಯಿಂದ ತೆರಳಿದ್ದರು.
ಬೆಳಿಗ್ಗೆ ಬಂದು ನೋಡಿದರೆ, ಶಮಿತಾ ರೂಮಿನಿಂದ ಹೊರಗೆ ಬಂದಿರಲಿಲ್ಲ, ಮನೆಯವರು ಬಾಗಿಲು ತಟ್ಟಿದರೂ ತೆರೆಯಲಿಲ್ಲ. ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಹೀಗಾಗಿ ಮನೆಯವರು ಪೊಲೀಸರಿಗೆ ವಿಚಾರ ತಿಳಿಸಿದ್ದು, ಶಮಿತಾ ಅವರ ಪೋಷಕರು ಸ್ಥಳಕ್ಕೆ ಆಗಮಿಸುವವರೆಗೂ ಕೋಣೆಯ ಬಾಗಿಲು ತೆರೆದಿರಲಿಲ್ಲ ಬಳಿಕ ಪೋಷಕರ ಸಮ್ಮುಖದಲ್ಲಿ ಬಾಗಿಲು ಒಡೆದು ಶಮಿತಾ ಅವರ ಮೃತದೇಹವನ್ನು ಸ್ಥಳಾಂತರಿಸಲಾಯಿತು.
ಇನ್ನೂ ಸಾವಿಗೂ ಮುನ್ನ ಶಮಿತಾ ಡೆತ್ ನೋಟ್ ಬರೆದಿದ್ದಾರೆನ್ನಲಾಗಿದೆ. ಅನಾರೋಗ್ಯದ ಕಾರಣದಿಂದ ಬೇಸತ್ತು, ಜೀವಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.