ಸಿ.ಎಂ.ಇಬ್ರಾಹಿಂಗೆ ಕೋರ್ಟ್ ಶಾಕ್: ಜೆಡಿಎಸ್ ಚಿಹ್ನೆ, ಲೆಟರ್ ಹೆಡ್ ಬಳಸುವಂತಿಲ್ಲ..!
![cm ibrahim](https://www.mahanayaka.in/wp-content/uploads/2024/01/CM-Ibrahim.jpg)
ಬೆಂಗಳೂರು: ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ಚಿಹ್ನೆ, ಲೆಟರ್ ಹೆಡ್ ಬಳಕೆ ಮಾಡುವಂತಿಲ್ಲ ಹಾಗೂ ಪಕ್ಷದ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸುವಂತಿಲ್ಲ, ಪದಾಧಿಕಾರಿಗಳನ್ನೂ ನೇಮಕ ಮಾಡುವಂತಿಲ್ಲ ಎಂದು ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿರುವ ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ಅವರಿಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.
ಈ ಮೂಲಕ ಜೆಡಿಎಸ್ ವಿರುದ್ಧದ ಸಿ.ಎಂ.ಇಬ್ರಾಹಿಂ ಹೋರಾಟಕ್ಕೆ ಹಿನ್ನಡೆಯಾಗಿದೆ. ಹೆಚ್.ಡಿ ದೇವೇಗೌಡರ ನೇತೃತ್ವದಲ್ಲಿ ನಡೆದಿದ್ದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಳಿಕ, ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.
ಆದರೆ ಜೆಡಿಎಸ್‍ನಿಂದ ಉಚ್ಚಾಟನೆ ಮಾಡಲಾಗಿದ್ದರೂ, ಸಿಎಂ ಇಬ್ರಾಹಿಂ ಜೆಡಿಎಸ್ ಪಕ್ಷದ ಚಿಹ್ನೆ ಬಳಸುತ್ತಿದ್ದರು. ಇದೀಗ ಯಾವುದೇ ಪಕ್ಷದ ಚಿಹ್ನೆ ಬಳಸದಂತೆ ಆದೇಶ ನೀಡುವುದರ ಜೊತೆಗೆ ಜೆಡಿಎಸ್ ಪಕ್ಷದ ಚಿಹ್ನೆ, ಲೆಟರ್ ಹೆಡ್ ಬಳಕೆ ಮಾಡುವಂತಿಲ್ಲ. ಹಾಗೂ ಪಕ್ಷದ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸುವಂತಿಲ್ಲ. ಇಷ್ಟು ಮಾತ್ರವಲ್ಲದೇ ಪದಾಧಿಕಾರಿಗಳನ್ನೂ ನೇಮಕ ಮಾಡುವಂತಿಲ್ಲ ಎಂದು ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.
ತನ್ನನ್ನು ಉಚ್ಚಾಟನೆ ಮಾಡಿದ ಬೆನ್ನಲ್ಲೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಸಿಎಂ ಇಬ್ರಾಹಿಂ, ಎಚ್.ಡಿ.ದೇವೇಗೌಡ, ಎಚ್.ಡಿ ಕುಮಾರಸ್ವಾಮಿ ಅವರನ್ನ ಪ್ರತಿವಾದಿಯಾಗಿಸಿದ್ದರು. ಪದಾಧಿಕಾರಿಗಳ ಉಚ್ಚಾಟನೆ, ಹಂಗಾಮಿ ಅಧ್ಯಕ್ಷ ನೇಮಕ ಕಾನೂನು ಬಾಹಿರವಾಗಿದ್ದು, ಅನೂರ್ಜಿತಗೊಳಿಸಿ ಅಂತ ಮನವಿ ಮಾಡಿದ್ದರು. ಅಲ್ಲದೇ ಹೆಚ್ ಡಿ ದೇವೇಗೌಡರಿಗೆ ಪರ್ಯಾಯವಾಗಿ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ ನಾಣು ಅವರನ್ನು ಸಿ ಎಂ ಇಬ್ರಾಹೀಂ ಆಯ್ಕೆ ಮಾಡಿದ್ದರು. ಅಲ್ಲದೇ, ತೆನೆ ಹೊತ್ತ ಮಹಿಳೆ ಗುರುತು ನಮಗೆ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ಪತ್ರ ಕೂಡ ಬರೆದಿರೋದಾಗಿ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದರು.