ಮದ್ಯಪಾನ ಮಾಡಿ ಶಾಲಾ ವಾಹನ ಚಲಾಯಿಸುತ್ತಿದ್ದ ಚಾಲಕರು: 16 ಚಾಲಕರ ವಿರುದ್ಧ ಪ್ರಕರಣ ದಾಖಲು - Mahanayaka

ಮದ್ಯಪಾನ ಮಾಡಿ ಶಾಲಾ ವಾಹನ ಚಲಾಯಿಸುತ್ತಿದ್ದ ಚಾಲಕರು: 16 ಚಾಲಕರ ವಿರುದ್ಧ ಪ್ರಕರಣ ದಾಖಲು

school bus
23/01/2024

ಬೆಂಗಳೂರು: ಇದೆಂಥಾ ದುಸ್ಥಿತಿ, ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಸ್ಕೂಲ್ ವಾಹನ ಚಾಲಕರು ಕುಡಿದು ವಾಹನ ಚಲಾಯಿಸುತ್ತಿರುವುದು ಬೆಳಕಿಗೆ ಬಂದಿದ್ದು, ಪೋಷಕರನ್ನು ಆತಂಕಕ್ಕೀಡು ಮಾಡಿದೆ. ಶಾಲಾ ಆಡಳಿತ ಮಂಡಳಿಗಳ ಬೇಜವಾಬ್ದಾರಿ ವಿರುದ್ಧವೂ ಆಕ್ರೋಶ ಕೇಳಿ ಬಂದಿದೆ.

ಬೆಂಗಳೂರು ಸಂಚಾರಿ ಪೊಲೀಸರು ಶಾಲಾ ವಾಹನಗಳ ಕಾರ್ಯಾಚರಣೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಬೆಳಗ್ಗೆ 7ರಿಂದ 9:30ರವರೆಗೆ ಸುಮಾರು 3,414 ಶಾಲಾ ವಾಹನಗಳನ್ನು ತಪಾಸಣೆ ಮಾಡಿದ್ದು ಈ ಪೈಕಿ 16 ಚಾಲಕರು ಮದ್ಯಸೇವಿಸಿ ಶಾಲಾ ವಾಹನ ಚಾಲನೆ ಮಾಡಿದ್ದು ಬೆಳಕಿಗೆ ಬಂದಿದೆ.

ಸದ್ಯ 16 ಶಾಲಾ ಚಾಲಕರ ವಿರುದ್ಧ ಸಂಚಾರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಕುಡಿದು ವಾಹನ ಚಲಾಯಿಸುತ್ತಿದ್ದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. 16 ಚಾಲಕರ ವಾಹನ ಪರವಾನಗಿ ಪತ್ರ ಆರ್ಟಿಒ ಕಚೇರಿಗೆ ರವಾನಿಸಲಾಗಿದೆ.

ಶಾಲಾ ಮಕ್ಕಳನ್ನು ಕರೆತರುವ ವಾಹಗಳ ಚಾಲಕರಿಗೆ ಸನ್ನಡತೆಯ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಶಿಕ್ಷಣ ಇಲಾಖೆ ಕಡ್ಡಾಯ ಮಾಡಿತ್ತು. ಆದರೆ ಬೆಳ್ಳಂಬೆಳಗ್ಗೆ ಕುಡಿದು ವಾಹನ ಚಲಾಯಿಸುವ ಶಾಲಾ ವಾಹನ ಚಾಲಕರು ಮತ್ತು ಇಂತಹವರಿಗೆ ಅವಕಾಶ ನೀಡಿರುವ ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ