ಎತ್ತಿನಬಂಡಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪಿಕಪ್: ಮಹಿಳೆ ಸಾವು, ಎತ್ತು ಹಾಗೂ ನಾಲ್ವರಿಗೆ ಗಂಭೀರ ಗಾಯ

02/02/2024
ಬೆಳಗಾವಿ: ಎತ್ತಿನ ಚಕ್ರಬಂಡಿಗೆ ತರಕಾರಿ ಸಾಗಿಸುತ್ತಿದ್ದ ಪಿಕಪ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಬಳಿ ನಡೆದಿದೆ.
ಯಮನವ್ಚ ಮಡ್ಡಿ(42) ಮೃತಪಟ್ಟವರು ಎಂದು ತಿಳಿದು ಬಂದಿದೆ. ಒಟ್ಟು ನಾಲ್ವರು ಎತ್ತಿನಬಂಡಿಯಲ್ಲಿ ಹೊಲಕ್ಕೆ ಜೋಳ ರಾಶಿ ಮಾಡಲು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ಧಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಎತ್ತಿನ ಬಂಡಿ ಹೊತ್ತು ಸಾಗುತ್ತಿದ್ದ ಎತ್ತು ಕೂಡ ಗಂಭೀರವಾಗಿ ಗಾಯಗೊಂಡಿದೆ. ಘಟನಾ ಸ್ಥಳಕ್ಕೆ ಕಡಕೋಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.