ಪ್ರಾಣಕ್ಕೆ ಕುತ್ತು ತಂದ ವಿಮೆ | ಗರ್ಭಿಣಿ ಪತ್ನಿಯನ್ನು  ಬೆಟ್ಟದಿಂದ ತಳ್ಳಿದ ಪತಿ - Mahanayaka
3:43 AM Wednesday 11 - December 2024

ಪ್ರಾಣಕ್ಕೆ ಕುತ್ತು ತಂದ ವಿಮೆ | ಗರ್ಭಿಣಿ ಪತ್ನಿಯನ್ನು  ಬೆಟ್ಟದಿಂದ ತಳ್ಳಿದ ಪತಿ

17/02/2021

ಟರ್ಕಿ: ವಿಮೆ ಅಂದ್ರೆ, ಜೀವನಕ್ಕೆ ಭದ್ರತೆ ಅಂತ ಹೇಳುತ್ತಾರೆ. ಆದರೆ ಇಲ್ಲಿ ವಿಮೆ ಜೀವಕ್ಕೆ ಕುತ್ತು ತಂದ ಘಟನೆ ನಡೆದಿದೆ.  ಪತಿರಾಯನೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಟರ್ಕಿಯ ಮುಗ್ಲಾ ನಗರದ ಬಟರ್ ಫ್ಲೈ ಕಣಿವೆಗೆ ಕರೆದೊಯ್ದಿದ್ದು,  ಪತ್ನಿಯ ಜೊತೆಗೆ ಸೆಲ್ಫಿ ತೆಗೆಯುತ್ತಾ, ನಟಿಸಿ ಕೊನೆಗೆ ಎತ್ತರದ ಶಿಖರದಿಂದ ಪತ್ನಿಯನ್ನು ಕೆಳಕ್ಕೆ ತಳ್ಳಿದ್ದಾನೆ.

ಪತಿಯ ದುಷ್ಕೃತ್ಯದಿಂದಾಗಿ  ಶಿಖರದಿಂದ ಕೆಳಗೆ ಬಿದ್ದ 7 ತಿಂಗಳ ಗರ್ಭಿಣಿ, 32 ವರ್ಷ ವಯಸ್ಸಿನ ಸೆಮ್ರಾ ಅಯ್ಸಾಲ್  ತನ್ನ ಮಗು ಸೇರಿದಂತೆ ತಾನು ಸಾವಿಗೀಡಾಗಿದ್ದಾಳೆ.  40 ವರ್ಷದ ವಯಸ್ಸಿನ ಈಕೆಯ ಪತಿ ಹಕನ್ ಅಯ್ಸಾಲ್ ಇದೀಗ  ಕಂಬಿ ಎಣಿಸುತ್ತಿದ್ದಾನೆ.

ಸೆಮ್ರಾ ಅಯ್ಸಾಲ್   ಶಿಖರದಿಂದ ಆಕಸ್ಮಿಕವಾಗಿ ಬಿದ್ದಿದ್ದಾಳೆ ಎಂದೇ ಆರಂಭದಲ್ಲಿ ಭಾವಿಸಲಾಗಿತ್ತು.  ಆದರೆ, ಪತ್ನಿಯ ಕೊಲೆಗೆ ಪೂರ್ವ ಯೋಜನೆ ಹಾಕಿದ್ದ ಹಕನ್ ಅಯ್ಸಾಲ್, ಮೂರು ಗಂಟೆಗಳ ಕಾಲ ಪತ್ನಿಯ ಜೊತೆ ಸಂತಸದಲ್ಲಿ ಕಳೆದು ಬಳಿಕ ಯಾರೂ ಇಲ್ಲದಿರುವುದನ್ನು ಕಂಡು ಪತ್ನಿಯನ್ನು ಕೆಳಗೆ ತಳ್ಳಿದ್ದಾನೆ ಎನ್ನುವುದು ತಿಳಿದು ಬಂದಿದೆ.

ಪತ್ನಿ ಸಾವನ್ನಪ್ಪಿ ಕೆಲವೇ ಸಮಯದಲ್ಲಿ ಹಕನ್ ಅಯ್ಸಾಲ್  ಪತ್ನಿಯ ಹೆಸರಿನಲ್ಲಿದ್ದ ವಿಮಾ ಪಾವತಿ ಹಕ್ಕನ್ನು ಪಡೆದುಕೊಂಡಿದ್ದಾನೆ.  ತನಿಖೆಯಲ್ಲಿ ಪತ್ನಿಯ ಹತ್ಯೆ ವಿಚಾರ ತಿಳಿದು ಬಂದ ತಕ್ಷಣವೇ ವಿಮೆಯನ್ನು ನಿರಾಕರಿಸಲಾಗಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆರೋಪಿ ಹಕನ್ ಅಯ್ಸಾಲ್ ನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಇತ್ತೀಚಿನ ಸುದ್ದಿ