ಶ್ರೀಕೃಷ್ಣ 5 ಗ್ರಾಮಗಳನ್ನು ಕೇಳಿದ್ರೆ ನಾವು 3 ಶ್ರದ್ಧಾಕೇಂದ್ರವನ್ನು ಕೇಳುತ್ತಿದ್ದೇವೆ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆ - Mahanayaka

ಶ್ರೀಕೃಷ್ಣ 5 ಗ್ರಾಮಗಳನ್ನು ಕೇಳಿದ್ರೆ ನಾವು 3 ಶ್ರದ್ಧಾಕೇಂದ್ರವನ್ನು ಕೇಳುತ್ತಿದ್ದೇವೆ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆ

08/02/2024

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ ಬಿಜೆಪಿಗೆ ಮುಂದಿನ ಟಾರ್ಗೆಟ್ ಕಾಶಿ ಹಾಗೂ ಮಥುರಾನ ಎಂಬ ಪ್ರಶ್ನೆ ಸೃಷ್ಟಿಯಾಗಿದೆ. ಯಾಕೆಂದರೆ ವಿಧಾನಸಭೆ ಅಧಿವೇಶನದಲ್ಲಿ ಸಿಎಂ
ಯೋಗಿ ಆದಿತ್ಯನಾಥ್ ಒಂದು ಹೇಳಿಕೆ ನೀಡಿರುವುದೇ ಇದಕ್ಕೆ ಕಾರಣ.

ಮಹಾಭಾರತದಲ್ಲಿ ಶ್ರೀಕೃಷ್ಣ, ಕೌರವರ ಜೊತೆಗಿನ ಸಂಧಾನದಲ್ಲಿ ಕನಿಷ್ಠ 5 ಗ್ರಾಮಗಳನ್ನು ನೀಡಿ ಎಂದು ಮನವಿ ಮಾಡಿದ್ದ. ಆದರೆ ಈಗ ಹಿಂದೂ ಸಮುದಾಯ ಪ್ರಮುಖ 3 ಶ್ರದ್ಧಾಕೇಂದ್ರವನ್ನು ಮಾತ್ರ ಮರಳಿ ಕೇಳುತ್ತಿದೆ ಎಂದು ಯುಪಿ‌ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಸಿಎಂ, ಅಯೋಧ್ಯೆಯಲ್ಲಿ ರಾಮನ ಭವ್ಯ ಮಂದಿರ ನಿರ್ಮಾಣವಾಗಿದೆ. ಕಾಶಿ ವಿಶ್ವನಾಥನಲ್ಲಿ ಕೂಡ ಪೂಜೆ ಆರಂಭವಾಗಿದೆ. ಇದೆಲ್ಲವೂ ಆದ ಮೇಲೆ ಮಥುರಾದಲ್ಲಿನ ಶ್ರೀಕೃಷ್ಣ ಸುಮ್ಮನೆ ಕೂರುತ್ತಾನೆಯೇ ಎಂದು ಪ್ರಶ್ನಿಸುವ ಮೂಲಕ, ಮಸೀದಿ ಇರುವ ಜಾಗದಲ್ಲಿ ಮಂದಿರ ನಿರ್ಮಾಣವಾಗಬೇಕು ಎಂದು ಪರೋಕ್ಷವಾಗಿ ಹೇಳಿಕೆ‌ ನೀಡಿದ್ದಾರೆ.

ಕೇವಲ ಐದೇ ಐದು ಗ್ರಾಮಮವನ್ನು ಪಾಂಡವರಿಗೆ ನೀಡಿ, ಉಳಿದೆಲ್ಲಾ ಆಸ್ತಿ,ಅಂತಸ್ತು, ಅರಮನೆಯನ್ನು ನಿಮ್ಮಲ್ಲೇ ಇರಲಿ ಎಂದು ಸಂಧಾನ ಸೂತ್ರ ಮುಂದಿಡಲಾಗಿತ್ತು. ಆದರೆ ಸಂಧಾನ ಒಪ್ಪಿಕೊಳ್ಳದ ಕಾರಣ ಕೊನೆಗೆ ಏನಾಯಿತು ಅನ್ನೋದು ಎಲ್ಲರಿಗೂ ಗೊತ್ತು. ಈಗ ಹಿಂದೂ ಸಮುದಾಯ ಅತ್ಯಂತ ಪವಿತ್ರ, ಶ್ರದ್ಧಾ ಭಕ್ತಿಯ ಮೂರು ಕೇಂದ್ರಗಳನ್ನು ಮಾತ್ರ ಕೇಳುತ್ತಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ಮೂಲಕ ಸಂಧಾನದ ಮೂಲಕ ಇನ್ನುಳಿದ ಕಾಶಿ ಹಾಗೂ ಮಥುರಾ ಮಂದಿರ ಮರಳಿದರೆ ಬೇರೆ ಮಂದಿರ ಕೇಳುವ ಪ್ರಶ್ನೆ ಇಲ್ಲ, ಎಂದಿದ್ದಾರೆ.

2019 ರಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಲಾಗಿದೆ. ವಾರಾಣಸಿಯ ಕಾಶಿ ವಿಶ್ವನಾಥ ದೇಗುಲದ ಪ್ರಕರಣದಲ್ಲಿ ಮೊದಲ ಜಯ ಸಾಧಿಸಲಾಗಿದೆ. ಇದೀಗ ಮಥುರಾದ ಕೃಷ್ಣನ ಮಂದಿರವನ್ನು ಅಭಿವೃದ್ಧಿಪಡಿಸಬೇಕಿದೆ ಎಂದಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣಪ್ರತಿಷ್ಠೆ ಬಳಿಕ ಕಾಶಿಯ ನಂದಿ ಬಾಬನಿಗೆ ಅನಿಸುತ್ತಿದೆ ನಾವು ಯಾಕೆ ಇನ್ನೂ ಕಾಯಬೇಕು ಎಂದು ಯೋಗಿ ಹೇಳಿದ್ದಾರೆ. ಈ ಕಾಯುವಿಕೆಗೆ ಇತ್ತೀಚೆಗೆ ಗ್ಯಾನವಾಪಿ ನೆಲಮಾಳಿಗೆಯಲ್ಲಿರುವ ಹಿಂದೂ ಮೂರ್ತಿಗಳ ಪೂಜೆಗೆ ಅವಕಾಶ ಸಿಕ್ಕಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ