ಪ್ರತಿಭಟನೆಯ ವೇಳೆ ಸಾವಿಗೀಡಾಗಿದ್ದ ರೈತನ ಶವವನ್ನು ಇಲಿಗಳಿಗೆ ತಿನ್ನಲು ಬಿಟ್ಟ ಹರ್ಯಾಣ ಸರ್ಕಾರ
ಚಂಡೀಗಡ: ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 70 ವರ್ಷ ವಯಸ್ಸಿನ ರೈತ ದಿಲ್ಲಿ ಹಾಗೂ ಹರ್ಯಾಣ ನಡುವಿನ ಗಡಿ ಕುಂಡ್ಲಿ ಬಾರ್ಡರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಸೋನಿಪತ್ ನ ಆಸ್ಪತ್ರೆಯಲ್ಲಿಡಲಾಗಿತ್ತು. ಆಸ್ಪತ್ರೆಯಲ್ಲಿ ಇಲಿಗಳು ರೈತನ ಮೃತದೇಹವನ್ನು ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ.
ರಾಜೇಂದ್ರ ಸರೊಹ್ ಎಂಬವರು ಬುಧವಾರ ಮೃತಪಟ್ಟಿದ್ದರು. ಅವರ ಶವ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಪರೀಕ್ಷೆ ನಡೆಸಲು ಶವವನ್ನು ಫ್ರೀಝರ್ನಿಂದ ಹೊರ ತೆಗೆದಾಗ ಮುಖ ಹಾಗೂ ಕಾಲಿನ ಭಾಗವನ್ನು ಇಲಿಗಳು ತಿಂದಿರುವುದು ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಆ ಕಾಂಗ್ರೆಸ್, ಬಿಜೆಪಿಯನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದು, ಇಂತಹ ದುಸ್ಥಿತಿಯನ್ನು ಹಿಂದೆಂದೂ ಕಂಡಿರಲಿಲ್ಲ. ಆದರೆ ಬಿಜೆಪಿ ಆಡಳಿತದಲ್ಲಿ ಕಾಣುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ರೈತನ ಸಾವಿಗೆ ನಿಖರ ಕಾರಣ ತಿಳಿಯುವ ಉದ್ದೇಶದಿಂದ ಶವವನ್ನು ಫ್ರೀಝರ್ ನಲ್ಲಿ ಇಡಲಾಗಿತ್ತು. ಗುರುವಾರ ಮೃತದೇಹವನ್ನು ಫ್ರೀಝರ್ ನಿಂದ ಹೊರತೆಗೆದಾಗ ಮೃತದೇಹವನ್ನು ಇಲಿ ತಿಂದಿರುವುದು ಬೆಳಕಿಗೆ ಬಂದಿದೆ. ಇನ್ನೂ ಈ ಸಂಬಂಧ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದೇವೆ. ಅದರ ವರದಿಯ ಮೇರೆಗೆ ಕಾರ್ಯನಿರ್ವಹಿಸುತ್ತೇವೆ ಎಂದು ಆಸ್ಪತ್ರೆಯ ಪ್ರಧಾನ ವೈದ್ಯಕೀಯ ಅಧಿಕಾರಿ ಜೈ ಭಗವಾನ್ ಹೇಳಿದ್ದಾರೆ.