ಉನ್ನಾವೂ: ಬಾಲಕಿಯರ ಸಾವು ಪ್ರಕರಣ | ಕೊನೆಗೂ ಆರೋಪಿಯ ಬಂಧನ | ಸಿಗರೇಟ್ ತುಂಡು, ಖಾಲಿ ಬಾಟಲಿ ನೀಡಿದ ಸುಳಿವು
ಉತ್ತರಪ್ರದೇಶ: ಉತ್ತರ ಪ್ರದೇಶದ ಉನ್ನಾವೋದಲ್ಲಿ ಇಬ್ಬರು ದಲಿತ ಬಾಲಕಿಯರು ಸಾವನ್ನಪ್ಪಿ, ಒಬ್ಬಳು ಗಂಭೀರ ಸ್ಥಿತಿಯಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳದಲ್ಲಿ ದೊರೆತ ಸುಳಿವುಗಳ ಜಾಡು ಹಿಡಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ.
ವಿನಯ್ ಅಲಿಯಾಸ್ ಲಂಬು(18) ಹತ್ಯೆ ಆರೋಪಿಯಾಗಿದ್ದಾನೆ. ಈ ಮೂವರು ಅಕ್ಕ ತಂಗಿಯರ ಪೈಕಿ ಓರ್ವಳನ್ನು ಲಂಬು ಪ್ರೀತಿಸುತ್ತಿದ್ದ. ಆದರೆ ಇದಕ್ಕೆ ಆಕೆ ಒಪ್ಪದ ಕಾರಣ ಕೊಲೆ ಮಾಡಲು ಯತ್ನಿಸಿದ್ದು, ಇದರ ಪರಿಣಾಮ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದು, ಆತ ಪ್ರೀತಿಸುತ್ತಿದ್ದ ಬಾಲಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ವಿನಯ್ ಪಕ್ಕದ ಊರಿನ ಯುವಕನಾಗಿದ್ದಾನೆ. ಈತನ ಹೊಲ ಬಾಲಕಿಯರ ಹೊಲದ ಪಕ್ಕದಲ್ಲಿಯೇ ಇದೆ. ಹೀಗಾಗಿ ಬಾಲಕಿಯರಿಗೂ ಈತನ ಪರಿಚಯ ಇತ್ತು. ಆದರೆ ಬಾಲಕಿಯರ ಪೈಕಿ ಓರ್ವಳನ್ನು ಈತ ಪ್ರೀತಿಸಿದ್ದು, ಆಕೆ ನಿರಾಕರಿಸಿದಾಗ ಕೋಪಗೊಂಡಿದ್ದಾನೆ.
ಬಾಲಕಿಯರ ಬಳಿಯಲ್ಲಿ ನಯವಿನಯದಿಂದ ನಡೆದುಕೊಂಡಿದ್ದ ಈತ ತಿಂಡಿಯಲ್ಲಿ ಕ್ರಿಮಿನಾಶಕ ವಿಷ ಬೆರೆಸಿ ನೀಡಿದ್ದಾನೆ. ಕುಡಿಯುವ ನೀರಿನಲ್ಲಿಯೂ ಕ್ರಿಮಿನಾಶಕ ಬೆರೆಸಿದ್ದಾನೆ. ಇದನ್ನು ಕುಡಿದ ಬಾಲಕಿಯರ ಪೈಕಿ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದು, ಓರ್ವಳ ಸ್ಥಿತಿ ಗಂಭೀರವಾಗಿದೆ. ಘಟನೆ ನಡೆದ ತಕ್ಷಣವೇ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಾಲಕಿಯರ ಮೃತದೇಹ ದೊರೆತ ಸ್ಥಳದಲ್ಲಿ ಖಾಲಿ ನೀರಿನ ಬಾಟಲಿ ಹಾಗೂ ಸಿಗರೇಟ್ ತುಂಡುಗಳು ಬಿದ್ದುದನ್ನು ಗಮನಿಸಿದ ಪೊಲೀಸರು ಅದರ ಆಧಾರದಲ್ಲಿ ತನಿಖೆ ನಡೆಸಿದ್ದಾರೆ. ಇದೀಗ ವಿನಯ್ ನನ್ನು ಬಂಧಿಸಿದ್ದು, ತಾನೇ ಈ ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ