ಇಬ್ಬರು ಅತ್ಯಾಚಾರ ಸಂತ್ರಸ್ತ ಬಾಲಕಿಯರು ಸಾವಿಗೆ ಶರಣಾದ ಬೆನ್ನಲ್ಲೇ ಬಾಲಕಿಯರ ತಂದೆ ಅನುಮಾನಾಸ್ಪದ ಸಾವು!
ಕಾನ್ಪುರ: ರಾಮರಾಜ್ಯ ಎಂದೇ ಇತ್ತೀಚೆಗೆ ಕರೆಯಲ್ಪಡುವ ಉತ್ತರ ಪ್ರದೇಶದಲ್ಲಿ ಹೆಣ್ಣುಮಕ್ಕಳ ಸ್ಥಿತಿ ಹೇಗಿದೆ ಅನ್ನೋದು ಜಗಜ್ಜಾಹೀರಾಗುತ್ತಿದೆ. ಈ ನಡುವೆ ಇದೀಗ ಕಾನ್ಪುರದಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ.
ಕಾನ್ಪುರದ ಘಟಂಪುರ ಪ್ರದೇಶದ ಇಟ್ಟಿಗೆ ಭಟ್ಟಿಯಲ್ಲಿ ಇಬ್ಬರು ಬಾಲಕಿಯರಿಗೆ ಬಲವಂತವಾಗಿ ಮದ್ಯಕುಡಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ನಡೆದಿತ್ತು. ಈ ಘಟನೆಯಿಂದ ಮನನೊಂದು ಸಂತ್ರಸ್ತ ಬಾಲಕಿಯರು ಸಾವಿಗೆ ಶರಣಾಗಿದ್ದಾರೆ.
ಇವರ ಸಾವಿನ ನೋವು ಸಹಿಸಲು ಸಾಧ್ಯವಾಗದೇ ಜೊತೆಗೆ ಕೇಸ್ ವಾಪಸ್ ಪಡೆಯುವಂತೆ ಆರೋಪಿಗಳ ಕಡೆಯವರ ಒತ್ತಡಕ್ಕೆ ಬೆದರಿ ಬಾಲಕಿಯರ ತಂದೆ ಮರಕ್ಕೆ ನೇಣುಬಿಗಿದು ಸಾವಿಗೆ ಶರಣಾಗಿರುವ ಘಟನೆ ನಡೆದಿದೆ.
ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದೆಡೆಯಲ್ಲಿ ಆರೋಪಿಗಳನ್ನು ರಕ್ಷಿಸಲು ನಿರಂತರ ಪ್ರಯತ್ನಗಳು ಮುಂದುವರಿಸಲಾಗಿದೆ. ಸಂತ್ರಸ್ತೆಯರ ಕುಟುಂಬಸ್ಥರ ಪ್ರಕಾರ, ಬಾಲಕಿಯ ತಂದೆಗೆ ಕೇಸ್ ವಾಪಸ್ ಪಡೆಯುವಂತೆ ಆರೋಪಿಗಳ ಕಡೆಯವರು ಮನೆಗೆ ಬಂದು ಒತ್ತಡ ಹಾಕಿದ್ದರು. ಇದರ ಮರು ದಿನವೇ ಇವರ ಮನೆಯಿಂದ ಎರಡು ಕಿ.ಮೀ. ದೂರದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತಂದೆಯ ಮೃತದೇಹ ಪತ್ತೆಯಾಗಿದೆ.
ಘಟನೆ ಸಂಬಂಧ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಸಾಮಾಜಿಕ ಜಾಲತಾಣ X ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಕಾನ್ಪುರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಇಬ್ಬರು ಅಪ್ರಾಪ್ತ ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಆ ಬಾಲಕಿಯರ ತಂದೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತ್ರಸ್ತೆಯ ಕುಟುಂಬದ ಮೇಲೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು.
ಉತ್ತರ ಪ್ರದೇಶದಲ್ಲಿ ಸಂತ್ರಸ್ತ ಬಾಲಕಿಯರು ಮತ್ತು ಮಹಿಳೆಯರು ನ್ಯಾಯ ಕೇಳಲು ಹೋದರೆ, ಅವರ ಸಂಸಾರವನ್ನು ಹಾಳು ಮಾಡುವ ನಿಯಮ ಬಂದಿದೆ. ಉನ್ನಾವೋ, ಹತ್ರಾಸ್ ನಿಂದ ಕಾನ್ಪುರದವರೆಗೆ– ಎಲ್ಲೆಲ್ಲಿ ಹೆಣ್ಣಿಗೆ ಹಿಂಸೆ ಕೊಟ್ಟರೂ ಅವರ ಸಂಸಾರವೇ ನಾಶವಾಯಿತು. ಕಾನೂನು ಎಂಬುದೇ ಇಲ್ಲದ ಈ ಜಂಗಲ್ ರಾಜ್ಯದಲ್ಲಿ ಹೆಣ್ಣಾಗಿ ಹುಟ್ಟುವುದೇ ಅಪರಾಧವೆನಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth