ಬೆಲೆ ಏರಿಕೆ ಆಗಿದೆ, ಜನರಿಗೆ ಗುರುತು ಸಿಗಬಾರದು ಎಂದು ಮೋದಿ ಗಡ್ಡ ಬೆಳೆಸಿದ್ದಾರೆ | ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಹೇಳಿಕೆಗೆ ನೀಡಿದ್ದು, ಮೋದಿಯವರು ಇತ್ತೀಚೆಗಷ್ಟೇ ಗಡ್ಡ ಬಿಟ್ಟುಕೊಂಡು ಓಡಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿಡಂಬನೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಜನಸಾಮಾನ್ಯರು ಕಷ್ಟದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ದುಸ್ಥಿತಿಗೆ ಕಾರಣರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರತಿನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಜನ ಸಾಮಾನ್ಯರು ಕಷ್ಟದಲ್ಲಿ ದಿನ ದೂಡುವಂತಾಗಿದೆ. ದೇಶದ ಈ ದುಸ್ಥಿತಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ತಮ್ಮ ಗುರುತು ಸಿಗಬಾರದು ಎನ್ನುವ ಕಾರಣಕ್ಕೆ ಗಡ್ಡ ಬೆಳೆಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವ ಅಭಿವೃದ್ಧಿ ಕಾರ್ಯಗಳಿಗೂ ಸರ್ಕಾರದ ಬಳಿ ಹಣ ಇಲ್ಲ ಎನ್ನುತ್ತಾರೆ. ಸರ್ಕಾರ ನಡೆಸೋಕೆ ಆಗಲ್ಲ ಅಂದಮೇಲೆ ಮುಖ್ಯಮಂತ್ರಿಯಾಗಿ ಯಾಕಿದೀರ? ದುಡ್ಡಿಲ್ಲದಿದ್ದರೆ ಖುರ್ಚಿ ಬಿಟ್ಟು ಇಳಿಯಿರಿ. ನಾವು ಯಾರಾದರೂ ಅಧಿಕಾರ ನಡೆಸಿ ತೋರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸುಳ್ಳಿಗೆ ಪರ್ಯಾಯ ಪದ ಎಂದರೆ ಅದು ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪೂರ್ವದ ಭಾಷಣ ಹಾಗೂ ಇಂದಿನ ಆಡಳಿತ ಒಂದಕ್ಕೊಂದು ತದ್ವಿರುದ್ಧವಾಗಿದೆ. ಮೋದಿ, ಮೋದಿ ಅಂತ ಘೋಷಣೆ ಕೂಗುತ್ತಾ, ಅಧಿಕಾರ ಕೊಟ್ಟ ಜನರೇ ಇಂದು ಮೋಸಹೋಗಿದ್ದಾರೆ. ಮೋದಿಯವರ ನಿಜ ಬಣ್ಣವನ್ನು ಕಾಂಗ್ರೆಸ್ ಪಕ್ಷ ಬಯಲಿಗೆಳೆಯಲಿದೆ ಎಂದು ಸಿದ್ದರಾಮಯ್ಯ ಹೇಳಿದರು.