ಶಾಲಾ ಶಿಕ್ಷಕ, ಬಿಜೆಪಿ ಮುಖಂಡ, ಆತನ ಸ್ನೇಹಿತ ಸೇರಿ ಶಾಲಾ ಶಿಕ್ಷಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ಭೋಪಾಲ್: ಶಾಲಾ ಶಿಕ್ಷಕ, ಬಿಜೆಪಿ ಮುಖಂಡ ಹಾಗೂ ಆತನ ಸ್ನೇಹಿತ ಶಾಲಾ ಶಿಕ್ಷಕಿಯನ್ನು ಅಪಹರಿಸಿ 2 ದಿನಗಳ ಕಾಲ ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಘಟನೆ ಮಧ್ಯ ಪ್ರದೇಶದ ವಿಂಧ್ಯಾ ಪ್ರದೇಶದ ಶಹ್ದೋಲ್ ಜಿಲ್ಲೆಯಲ್ಲಿ ನಡೆದಿದೆ.
20 ವರ್ಷದ ಸಂತ್ರಸ್ತ ಶಾಲಾ ಶಿಕ್ಷಕಿ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಪ್ರಮುಖ ಆರೋಪಿಯಾಗಿರುವ ಶಾಲಾ ಶಿಕ್ಷಕ ರಾಜೇಶ್ ಶುಕ್ಲಾ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ವಿಜಯ್ ತ್ರಿಪಾಠಿ ಸೇರಿದಂತೆ ಅವರ ಇಬ್ಬರು ಸಹಾಯಕರು ಸೇರಿ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪಕ್ಕದ ಹಳ್ಳಿಗೆ ಕರೆದೊಯ್ದಿದ್ದಾರೆ.
ಪಕ್ಕದ ಹಳ್ಳಿಯ ನಿರ್ಜನ ಪ್ರದೇಶದಲ್ಲಿದ್ದ ಫಾರ್ಮ್ ಹೌಸ್ ಗೆ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದು, 2 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರಕ್ಕೂ ಮೊದಲು ಶಿಕ್ಷಕಿಗೆ ಬಲವಂತವಾಗಿ ಮದ್ಯ ಕೂಡ ಕುಡಿಸಲಾಗಿದೆ. 2 ದಿನಗಳ ನಂತರ ಆರೋಪಿಗಳು ಶಿಕ್ಷಕಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಶಿಕ್ಷಕಿ ಮನೆಗೆ ಬಾರದೇ ನಾಪತ್ತೆಯಾಗಿರುವ ಬಗ್ಗೆ ಇತ್ತ ಆಕೆಯ ಕುಟುಂಬಸ್ಥರು ಜೈತ್ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಶಿಕ್ಷಕಿ ಮನೆಗೆ ಬಂದಿದ್ದು, ನಡೆದ ವಿಚಾರವನ್ನು ಮನೆಯಲ್ಲಿ ವಿವರಿಸಿದ್ದಾರೆ. ತಕ್ಷಣವೇ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳಾದ ಶಿಕ್ಷಕ ರಾಜೇಶ್ ಶುಕ್ಲಾ ಮತ್ತು ಸ್ಥಳೀಯ ಬಿಜೆಪಿ ಮುಖಂಡ ವಿಜಯ್ ತ್ರಿಪಾಠಿ ಸೇರಿದಂತೆ ಮೂವರ ವಿರುದ್ಧ ಸಾಮೂಹಿಕ ಅತ್ಯಾಚಾರದ ಐಪಿಸಿ ಸೆಕ್ಷನ್ 376 ಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಸದ್ಯ ತಲೆ ಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.