ಈ ಬಾರಿ ಸುಮಲತಾ ಚುನಾವಣೆಗೆ ಸ್ಪರ್ಧಿಸಿದರೆ ಸೋಲ್ತಾರೆ: ಬಿಜೆಪಿ ಆಂತರಿಕ ವರದಿ?

ಮಂಡ್ಯ: ಬಿಜೆಪಿ—ಜೆಡಿಎಸ್ ಮೈತ್ರಿ ಆರಂಭಗೊಂಡ ಅಂದಿನಿಂದ ಇಂದಿನವರೆಗೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಿಚಾರದಲ್ಲಿ ಜೆಡಿಎಸ್ ಹಾಗೂ ಸಂಸದೆ ಸುಮಲತಾ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಈ ನಡುವೆ ಸುಮಲತಾ ಅವರು ರಾಜ್ಯ ಬಿಜೆಪಿ ನಾಯಕರನ್ನು ಲೆಕ್ಕಕ್ಕೇ ಇಡದೇ ನೇರವಾಗಿ ಬಿಜೆಪಿ ಹೈಕಮಾಂಡ್ ಜೊತೆಗೆ ಸಂಪರ್ಕ ಸಾಧಿಸಿ ಟಿಕೆಟ್ ಪಡೆದುಕೊಳ್ಳಲು ಮುಂದಾಗಿದ್ದಾರೆ. ಈ ನಡುವೆ ಬಿಜೆಪಿ ಹೈಕಮಾಂಡ್ ಗೆ ರಾಜ್ಯ ಬಿಜೆಪಿ ನಾಯಕರು ನೀಡಿದ್ದಾರೆ ಎನ್ನಲಾಗಿರುವ ವರದಿ ಅಚ್ಚರಿಗೆ ಕಾರಣವಾಗಿದೆ.
ಮಂಡ್ಯ ಸಂಸದೆ ಸುಮಲತಾ ಅವರಿಗೆ ಈ ಹಿಂದೆ ಇದ್ದಷ್ಟು ಜನಪ್ರಿಯತೆ ಈಗಿಲ್ಲ, ಈ ಬಾರಿ ಸುಮಲತಾ ಅವರಿಗೆ ಟಿಕೆಟ್ ನೀಡಿದರೆ ಅವರು ಸೋಲುತ್ತಾರೆ ಎಂದು ರಾಜ್ಯ ನಾಯಕರು ಬಿಜೆಪಿ ಹೈಕಮಾಂಡ್ ಗೆ ವರದಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಸುಮಲತಾ ಅವರ ಆಪ್ತರಾಗಿದ್ದ ಇಂಡವಾಳು ಸಚ್ಚಿದಾನಂದ ಕೂಡ ಕೇಸರಿ ಶಾಲು ಧರಿಸಿ ಸುಮಲತಾ ಅವರಿಂದ ದೂರ ಸರಿದಿದ್ದಾರೆ. ನಟ ದರ್ಶನ್ ಒಬ್ಬರ ಬೆಂಬಲದಿಂದ ಸುಮಲತಾ ಗೆಲ್ಲುತ್ತಾರೆಯೇ ಎನ್ನುವ ಪ್ರಶ್ನೆ ಇದೀಗ ಕೇಳಿ ಬಂದಿದೆ.
ಸುಮಲತಾ ರಾಜ್ಯ ಬಿಜೆಪಿ ನಾಯಕರನ್ನು ಡೋಂಟ್ ಕೇರ್ ಮಾಡಿರೋದಕ್ಕೆ ರಾಜ್ಯ ನಾಯಕರು ಈ ರೀತಿಯ ವರದಿ ನೀಡಿದ್ದಾರೆಯೇ ಅನ್ನುವ ಅನುಮಾನಗಳು ಕೂಡ ಸೃಷ್ಟಿಯಾಗಿವೆ.
ಬಿಜೆಪಿ ಟಿಕೆಟ್ ಸಿಗದೇ ಹೋದರೆ, ಸುಮಲತಾ ಅವರು ಪಕ್ಷೇತರರಾಗಿ ಸ್ಪರ್ಧಿಸಲೂ ಸಿದ್ಧ ಎಂದು ಹೇಳಿದ್ದ ಸಂಸದೆ ಸುಮಲತಾ ಬಳಿಕ ಜೆಡಿಎಸ್ ಬಿಜೆಪಿ ಮೈತ್ರಿ ಪಾಲಿಸಲು ಸಿದ್ಧ ಎಂದಿದ್ದರು. ಇದೀಗ ಚುನಾವಣೆ ಘೋಷಣೆಯಾದರೂ ಸುಮಲತಾ ಮಂಡ್ಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸುಮಲತಾ ಅವರ ಮೌನಕ್ಕೆ ಕಾರಣ ಏನು ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth