ಭಾರತದಲ್ಲಿ ಶೇ.30ರಷ್ಟು ಜನರು ಒಮ್ಮೆಯೂ ಬಿಪಿ ಚೆಕ್ ಮಾಡಿಸಿಲ್ವಂತೆ!: ಬಿಪಿ ಚೆಕ್ ಮಾಡುವುದರಿಂದಾಗುವ ಪ್ರಯೋಜನ ಏನು?

ಇತ್ತೀಚಿನ ದಿನಗಳಲ್ಲಿ ಭಾರತದ ಯುವ ಜನರಲ್ಲಿ ಬ್ಲಡ್ ಪ್ರೆಶರ್ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆ ಏರಿಕೆಯಾಗುತ್ತಿದೆ ಎಂಬ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಈ ವರದಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ ಈ ವರದಿಯನ್ನು ಪ್ರಕಟ ಮಾಡಿತ್ತು. ಆ ವರದಿಯು ಇನ್ನೊಂದು ಅಂಶವನ್ನೂ ತಿಳಿಸಿದೆ. ಅದೇನೆಂದರೆ ಭಾರತದಲ್ಲಿ 18 ರಿಂದ 54 ವರ್ಷ ವಯಸ್ಸಿನ ಶೇ.30 ರಷ್ಟು ಜನರು ಒಮ್ಮೆ ಕೂಡ ಬಿಪಿ ಚೆಕ್ ಮಾಡಿಸಿಲ್ಲವಂತೆ.
ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ಇದರಿಂದ ಈ ಸಮಸ್ಯೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವುದು ಕಳವಳ ಉಂಟು ಮಾಡಿದೆ. ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವವಾಯು ಪ್ರಮುಖ ಅಪಾಯಕಾರಿ ಅಂಶವಾಗಿದೆ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಆದರೆ ಅದಕ್ಕೆ ನಿಯಮಿತ ತಪಾಸಣೆ ಅತ್ಯಗತ್ಯವಾಗಿದೆ.
ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗಳ ಕನ್ಸಲ್ಟೆಂಟ್ ಕಾರ್ಡಿಯಾಲಜಿಸ್ಟ್ ಡಾ. ವರುಣ್ ಬನ್ಸಾಲ್ ಅವರು “ನಾವು ಆರೋಗ್ಯವಂತರಾಗಿದ್ದರೂ ಸಹ, ಅಧಿಕ ರಕ್ತದೊತ್ತಡ ಹಾಗೂ ಇನ್ನಿತರ ಹೃದಯರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಬಿಪಿ ಚೆಕ್ ಮಾಡುವುದು ಅವಶ್ಯಕʼ ಎಂದು ಹೇಳಿದ್ದಾರೆ.
ವರ್ಷಕ್ಕೊಮ್ಮೆ ಆದ್ರೂ ಬಿಪಿ ಚೆಕ್ ಮಾಡಿಸಬೇಕು. ಸ್ಥೂಲಕಾಯ ಹಾಗೂ ಹೃದಯ ಸಮಸ್ಯೆಗಳ ಕೌಟುಂಬಿಕ ಹಿನ್ನೆಲೆ ಹೊಂದಿರುವ ವ್ಯಕ್ತಿಗಳು, ಆಗಾಗ ಬಿಪಿ ಚೆಕ್ ಮಾಡುತ್ತಿರಬೇಕುʼ ಎಂದು ಹೇಳಿದ್ದಾರೆ.
ಬಿಪಿ ಚೆಕ್ ಮಾಡುವುದರಿಂದಾಗುವ ಪ್ರಯೋಜನ ಏನು?:
ನಿಯಮಿತ ಬಿಪಿ ತಪಾಸಣೆಯಿಂದ ಅಧಿಕ ರಕ್ತದೊತ್ತಡದ ಆರಂಭಿಕ ಪತ್ತೆ, ಹೃದಯಾಘಾತ, ಪಾರ್ಶ್ವವಾಯು ಅಥವಾ ಮೂತ್ರಪಿಂಡ ಕಾಯಿಲೆಯಂತಹ ತೊಡಕುಗಳನ್ನು ತಡೆಗಟ್ಟಲು ಹಾಗೂ ತಕ್ಷಣಕ್ಕೆ ಈ ಬಗ್ಗೆ ಎಚ್ಚರ ವಹಿಸಲು ಸಾಧ್ಯವಾಗುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth