ಲೋಕಸಭಾ ಚುನಾವಣೆ: ಬೆಂಗಳೂರಿನಲ್ಲಿ 24ರಿಂದ ಸೆಕ್ಷನ್ 144 ಜಾರಿ: ಯಾವುದಕ್ಕೆಲ್ಲ ನಿರ್ಬಂಧ?

ಬೆಂಗಳೂರು: ಎಪ್ರಿಲ್ 26ರಂದು ಲೋಕಸಭಾ ಚುನಾವಣೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.,
ಲೋಕಸಭೆ ಚುನಾವಣೆ ನಿಮಿತ್ತ ಏಪ್ರಿಲ್ 24 ರಂದು ಸಂಜೆ 6 ರಿಂದ ಏಪ್ರಿಲ್ 26ರ ಮಧ್ಯರಾತ್ರಿಯವರೆಗೆ ಸಿಆರ್ ಪಿಸಿಯ ಸೆಕ್ಷನ್ 144 ಜಾರಿಯಲ್ಲಿರಲಿದೆ.
ಐದು ಜನರಿಗಿಂತ ಹೆಚ್ಚು ಜನ ಗುಂಪುಗೂಡಬಾರದು, ರ‍್ಯಾಲಿಗಳು, ಸಾರ್ವಜನಿಕ ಸಭೆಗಳನ್ನು ನಡೆಸುವಂತೆ ಇಲ್ಲ. ಮಾರಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಹೊಂದಿರಬಾರದು. ಪ್ರತಿಮೆಗಳನ್ನು ಪ್ರದರ್ಶಿಸುವುದು ಮತ್ತು ಬೆಂಕಿ ಹಚ್ಚಿ ಸುಟ್ಟು ಹಾಕುವುದು ಮಾಡಬಾರದು. ಪ್ರಚೋದನಕಾರಿ ಭಾಷಣ ಮಾಡಬಾರದು. ಸಾರ್ವಜನಿಕವಾಗಿ ರಾಜಕೀಯ ಘೋಷಣೆ ಕೂಗಬಾರದು.
ಇನ್ನು ಈ ಅವಧಿಯಲ್ಲಿ, ಮತದಾನ ಕೇಂದ್ರದ 100 ಮೀಟರ್ ವ್ಯಾಪ್ತಿಯಲ್ಲಿ, ಪ್ರಚಾರ ಮಾಡಲು ಮತ್ತು ಪೋಸ್ಟರ್ ಗಳು ಮತ್ತು ಬ್ಯಾನರ್ ಗಳನ್ನು ಬಳಸಲು ಅನುಮತಿಯಿಲ್ಲ. ಮತದಾನ ಕೇಂದ್ರದ 100 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಗಳು, ಕಾರ್ಡ್ ಲೆಸ್ ಫೋನ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನ ಕೊಂಡೊಯ್ಯುವಂತೆ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಜಿಲ್ಲಾ ಚುನಾವಣಾ ಅಧಿಕಾರಿ (ಡಿಇಒ) ಯ ಅನುಮತಿಯೊಂದಿಗೆ ಅಧಿಕಾರಿಗಳು ಅಥವಾ ಸಿಬ್ಬಂದಿಗೆ ವಿನಾಯಿತಿ ಸಿಗಲಿದೆ.
ಈಗಾಗಲೇ ನಿಗದಿಯಾಗಿರುವ ವಿವಾಹ ಮುಂತಾದ ಕಾರ್ಯಕ್ರಮಗಳಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುವಂತಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಯಾವುದೇ ಪರಿಣಾಮ ಬೀರದೆ, ಅನುಮತಿಸಲಾದ ಮೆರವಣಿಗೆಗಳನ್ನು ನಡೆಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.
ಮದ್ಯ ಮಾರಾಟ ನಿಷೇಧ:
ಮತದಾನ ನಡೆಯುವ ಏಪ್ರಿಲ್ 26ರ ಮಧ್ಯರಾತ್ರಿ 12 ಗಂಟೆಯಿಂದ ಏಪ್ರಿಲ್ 27ರ ಮಧ್ಯರಾತ್ರಿವರೆಗೆ ಹಾಗೂ ಜೂನ್ 3ರ ಮಧ್ಯರಾತ್ರಿಯಿಂದ ಜೂನ್ 4ರ ಮಧ್ಯರಾತ್ರಿವರೆಗೆ ಮತಗಳ ಎಣಿಕೆಯ ಕಾರಣದಿಂದಾಗಿ, ನಗರದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಆದೇಶ ಹೊರಡಿಸಲಾಗಿದೆ.
ಈ ವೇಳೆ ಅಂಗಡಿಗಳು, ಬಾರ್ ಗಳು, ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಮತ್ತು ಹೋಟೆಲುಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗುವುದು. ರೆಸ್ಟೋರೆಂಟ್ ಗಳು ಮತ್ತು ಹೋಟೆಲ್ ಗಳಿಗೆ ಆಹಾರ ಮತ್ತು ಆಲ್ಕೊಹಾಲ್ ಮುಕ್ತ ಪಾನೀಯಗಳನ್ನು ಪೂರೈಸಲು ಮಾತ್ರ ಅನುಮತಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.
ಬೆಂಗಳೂರಿನ 4 ಲೋಕಸಭಾ ಸ್ಥಾನಗಳಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಬೆಂಗಳೂರು ಉತ್ತರ, ಬೆಂಗಳೂರು ಮಧ್ಯ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಗ್ರಾಮೀಣ ಪ್ರದೇಶಗಳಲ್ಲಿ ಏಪ್ರಿಲ್ 26 ರಂದು ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth