ತಮ್ಮನ ಆತ್ಮಹತ್ಯೆಯ ಸುದ್ದಿ ಕೇಳಿ ತಾನೂ ಆತ್ಮಹತ್ಯೆಗೆ ಶರಣಾದ ಅಣ್ಣ!
ಮೈಸೂರು: ತಮ್ಮನ ಆತ್ಮಹತ್ಯೆಯ ಸುದ್ದಿ ಕೇಳಿ ಅಣ್ಣ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ನಡೆದಿದ್ದು, ಇದೀಗ ಕುಟುಂಬಸ್ಥರು ಅಣ್ಣ-ತಮ್ಮಂದಿರನ್ನು ಅಕ್ಕ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ.
28 ವರ್ಷದ ವೆಂಕಟೇಶ್ ಮತ್ತು 26 ವರ್ಷದ ಹರೀಶ್ ಮೃತ ಸಹೋದರರಾಗಿದ್ದಾರೆ. ರೈತ ಕುಟುಂಬವಾಗಿದ್ದರಿಂದ ಹರೀಶ್ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದರು. ಆದರೆ ವಿಪರೀತ ವೇಗದಲ್ಲಿ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ.
ಈ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಚಿನ್ಮಯಿ ಗೌಡ ಹರೀಶ್ ಗೆ ಬುದ್ಧಿ ಹೇಳಿದ್ದರು. ಇತ್ತ ಅಣ್ಣ ವೆಂಕಟೇಶ್ ಕೂಡ ತಮ್ಮನಿಗೆ ಕರೆ ಮಾಡಿ ಬುದ್ಧಿ ಹೇಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಸಜಹ ಜಗಳವಾಗಿದೆ. ಅಣ್ಣ ನನಗೆ ಬೈದ ಎಂದು ನೊಂದ ಹರೀಶ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ತಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಅಣ್ಣ ವೆಂಕಟೇಶ್ ಗೆ ತಿಳಿದು ಬಂದಿದೆ. ಜೊತೆಗೆ ತಮ್ಮನ ಮೃತದೇಹದ ಫೋಟೋ ಕೂಡ ವಾಟ್ಸಾಪ್ ನಲ್ಲಿ ಬಂದಿದೆ. ಇದನ್ನು ನೋಡಿ ವೆಂಕಟೇಶ್ ತೀವ್ರವಾಗಿ ನೊಂದಿದ್ದು, ತಾನು ಬೈದಿದ್ದರಿಂದಾಗಿ ತಮ್ಮ ಸಾವಿಗೀಡಾದ ಎಂದು ತೀವ್ರವಾಗಿ ಕುಸಿದು ಹೋಗಿದ್ದಾರೆ.
ತನ್ನ ತಮ್ಮನ ಮೃತದೇಹ ಮನೆಗೆ ಬರುವುದರೊಳಗೆ ಸರಗೂರು ರಸ್ತೆಯ ಕಡೆಗೆ ಹೋದ ಅಣ್ಣ ವೆಂಕಟೇಶ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳೆದು ನಿಂತಿರುವ ಇಬ್ಬರು ಪುತ್ರರನ್ನು ಕಳೆದುಕೊಂಡ ಪೋಷಕರು ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ. ಪೋಷಕರ ಮೌನ ರೋನೆ ಯಾರಿಗೂ ಕೇಳಿಲ್ಲ.