ಯಾರನ್ನು ಕೇಳಿ ಹೆಚ್ಚುವರಿ ಅಂಕವನ್ನು ಕೊಟ್ಟಿದ್ದೀರಿ?: ಶಿಕ್ಷಣ ಇಲಾಖೆ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ - Mahanayaka
10:02 PM Thursday 19 - September 2024

ಯಾರನ್ನು ಕೇಳಿ ಹೆಚ್ಚುವರಿ ಅಂಕವನ್ನು ಕೊಟ್ಟಿದ್ದೀರಿ?: ಶಿಕ್ಷಣ ಇಲಾಖೆ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

siddaramaiah
18/05/2024

ಬೆಂಗಳೂರು: ಈ ಬಾರಿಯ ಎಸ್‌ ಎಸ್‌ ಎಲ್‌ ಸಿಯಲ್ಲಿ ಶೇ.20 ಗ್ರೇಸ್‌ ಮಾರ್ಕ್ಸ್‌ (SSLC Grace Marks) ಕೊಟ್ಟಿದ್ದಕ್ಕೆ  ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದು, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ತರಾಟೆಗೆತ್ತಿಕೊಂಡಿದ್ದಾರೆ.

ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ , ಶಿಕ್ಷಣ ಇಲಾಖೆಯನ್ನು ತರಾಟೆಗೆತ್ತಿಕೊಂಡಿದ್ದು,  ಯಾರನ್ನು ಕೇಳಿ ಹೆಚ್ಚುವರಿ ಅಂಕವನ್ನು ಕೊಟ್ಟಿರಿ? ಶಿಕ್ಷಣ ಗುಣಮಟ್ಟ ಕುಸಿದಿದ್ದು ಏಕೆ? ಎಂದು ಪ್ರಶ್ನಿಸಿದರು.

ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯ, ಎಸ್‌ ಎಸ್‌ ಎಲ್‌ ಸಿಗೆ ಗ್ರೇಸ್‌ ಮಾರ್ಕ್ಸ್‌ ಕೊಟ್ಟಿರುವ ಬಗ್ಗೆ ತೀವ್ರ ಅಸಮಾಧಾನವನ್ನು ಹೊರಹಾಕಿದರು.


Provided by

ಎಸ್‌ ಎಸ್‌ ಎಲ್‌ ಸಿಯಲ್ಲಿ ಶೇಕಡಾ 20 ಮಾರ್ಕ್ಸ್‌ ಅನ್ನು ಏಕೆ ಕೊಟ್ಟಿರಿ? ಯಾರನ್ನು ಕೇಳಿ ಹೆಚ್ಚುವರಿ ಅಂಕ ಕೊಟ್ಟಿರಿ? ಹೀಗೆ ಅಂಕ ಕೊಡುವ ಅಗತ್ಯತೆ ಏನಿತ್ತು? ಶಿಕ್ಷಣದ ಗುಣಮಟ್ಟ ಕುಸಿದಿದ್ದೇಕೆ? ಎಂದು ಶಿಕ್ಷಣ ಇಲಾಖೆ ಕಾರ್ಯದರ್ಶಿ ಮೇಲೆ ಗರಂ ಆಗಿದ್ದಲ್ಲದೆ, ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದರು.

ಗ್ರೇಸ್‌ ಮಾರ್ಕ್ಸ್‌ ಮರು ಪರಿಶೀಲಿಸಿ:

ಗ್ರೇಸ್ ಮಾರ್ಕ್ಸ್ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ತಜ್ಞರು ಸೇರಿ ಹಲವರಿಂದ ವಿರೋಧಗಳು ಕೇಳಿ ಬರುತ್ತಿವೆ. ಮೊದಲೇ ನಮ್ಮ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪಗಳು ಬರುತ್ತಿವೆ. ಅದರ ಮಧ್ಯೆ ಇದೂ ಒಂದು ಸೇರಿಕೊಂಡಿದೆ. ಗ್ರೇಸ್ ಮಾರ್ಕ್ಸ್ ಕೊಡುವುದು ಅವೈಜ್ಞಾನಿಕ ಎಂಬ ಬಗ್ಗೆ ಅಭಿಪ್ರಾಯಗಳು ಬರುತ್ತಿವೆ. ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಸ್‌ ಮಾರ್ಕ್ಸ್ ಕೊಡುವ ಬಗ್ಗೆ ಮರುಪರಿಶೀಲನೆ ಮಾಡಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಸ್ಪಷ್ಟನೆ ನೀಡಿದ ಮಧುಬಂಗಾರಪ್ಪ:

ಈ ವೇಳೆ ಸಚಿವ ಮಧು ಬಂಗಾರಪ್ಪ ಮಾತನಾಡಿ, ಎಸ್‌ ಎಸ್‌ ಎಲ್‌ ಸಿಯಲ್ಲಿ ಯಾವಾಗಲೂ ಶೇಕಡಾ 5ರಷ್ಟು ಗ್ರೇಸ್‌ ಮಾರ್ಕ್ಸ್‌ ಇತ್ತು. ಕೋವಿಡ್ ವೇಳೆ ಅದನ್ನು ಶೇಕಡಾ 10ಕ್ಕೆ ಏರಿಕೆ ಮಾಡಲಾಗಿತ್ತು. ಈ ಬಾರಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಳಕ್ಕಾಗಿ ಶೇಕಡಾ 20ರಷ್ಟು ಗ್ರೇಸ್‌ ಮಾರ್ಕ್ಸ್‌ ಕೊಟ್ಟು ಪಾಸ್‌ ಮಾಡಿದೆವು. ಇದು ಈ ವರ್ಷಕ್ಕೆ ಮಾತ್ರವಾಗಿದೆ. ಮುಂದಿನ ವರ್ಷದಿಂದ ಇದು ಮುಂದುವರಿಯುವುದಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ