ಎಲ್ಲರೂ ಒಗ್ಗಟ್ಟಾಗುತ್ತಿದ್ದಾರೆ, ದಲಿತರು ಒಗ್ಗಟ್ಟಾಗುವುದು ಯಾವಾಗ? - Mahanayaka
11:09 PM Friday 20 - September 2024

ಎಲ್ಲರೂ ಒಗ್ಗಟ್ಟಾಗುತ್ತಿದ್ದಾರೆ, ದಲಿತರು ಒಗ್ಗಟ್ಟಾಗುವುದು ಯಾವಾಗ?

28/02/2021

ದೇಶದಲ್ಲಿ ಪ್ರತಿಯೊಂದು ಸಮುದಾಯವು ಬಲಿಷ್ಠವಾಗುತ್ತಿದೆ. ಅವರ ಸಮುದಾಯಗಳು ತಮ್ಮ ಜಾತಿಯ ಜನರ ಮುಂದಿನ ಭವಿಷ್ಯಕ್ಕಾಗಿ ಹೋರಾಡುತ್ತಲೇ ಇದ್ದಾರೆ. ಆದರೆ ಸಾವಿರಾರು ವರ್ಷಗಳಿಂದಲೂ ಜಾತಿಯ ಕೂಪದಲ್ಲಿ ಬೇಯುತ್ತಿರುವ ಪರಿಶಿಷ್ಟ ಸಮುದಾಯಗಳು ಅಥವಾ ದಲಿತರ ಪ್ರಗತಿ ಸಾಧ್ಯವೇ ಆಗುತ್ತಿಲ್ಲ.

ಸಮಾಜದಲ್ಲಿ ತುಳಿತಕ್ಕೊಳಗಾಗದ ಸಮುದಾಯಗಳು ಕೂಡ ಮೀಸಲಾತಿಗಾಗಿ ಹೋರಾಟ ಮಾಡುತ್ತಿವೆ. ಆದರೆ, ಸಮಾಜದಲ್ಲಿ ತುಳಿತಕ್ಕೊಳಗಾಗಿರುವ ದಲಿತ ಸಮುದಾಯಕ್ಕೆ ನೀಡಲಾಗಿದ್ದ ಸವಲತ್ತುಗಳನ್ನು ಸರ್ಕಾರ ಕಿತ್ತುಕೊಂಡರೂ ಸರ್ಕಾರದ ವಿರುದ್ಧ ಸಿಡಿದೇಳುತ್ತಿಲ್ಲ.

ರಾಜ್ಯದಲ್ಲಿ ನೂರಾರು ದಲಿತ ಸಂಘಟನೆಗಳಿದ್ದರೂ ಇವು ಯಾವುದೂ ಒಗ್ಗಟ್ಟಾಗುತ್ತಿಲ್ಲ. ರಾಜ್ಯದಲ್ಲಿ ದಲಿತರು ರಾಜಕೀಯ ಸ್ಪಷ್ಟತೆಯನ್ನು ಕೂಡ ಹೊಂದಲು ಸಾಧ್ಯವಾಗುತ್ತಿಲ್ಲ. ಸಮುದಾಯಗಳಲ್ಲಿ ನಾಯಕತ್ವ ಛಿದ್ರಗೊಂಡಿದೆ. ಇಂತಹ ಸಂದರ್ಭದಲ್ಲಿ ದಲಿತ ಹೋರಾಟ ಕೇವಲ ಟೀಕೆ, ಟಿಪ್ಪಣಿಗೆ ಮಾತ್ರವೇ ಸೀಮಿತವಾಗಿದೆ.


Provided by

ದಲಿತರಿಗೆ ನೀಡಿರುವ ಸವಲತ್ತುಗಳನ್ನು ಒಂದೆಡೆ ಕಿತ್ತುಕೊಳ್ಳಲಾಗುತ್ತಿದೆ. ಇನ್ನೊಂದೆಡೆಯಲ್ಲಿ ಶೋಷಣೆಗೊಳಗಾಗದ ಸಮುದಾಯಗಳನ್ನು ಮೀಸಲಾತಿ ಹೋರಾಟಕ್ಕೆ ದೂಡುವ ಮೂಲಕ ಮೀಸಲಾತಿಯ ಮಹತ್ವವನ್ನು ಕಡಿಮೆ ಮಾಡುವ ಕೆಲಸವನ್ನು ಸ್ವತಃ ಬಲ ಪಂಥೀಯರೇ ಮಾಡಿಸುತ್ತಿದ್ದಾರೆ ಎನ್ನುವ ಅನುಮಾನಗಳೂ ಇವೆ.

ದೇಶವು ಅಧಃಪತನದತ್ತ ಸಾಗುವಾಗ ದಲಿತ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ನೂರಾರು ದಲಿತ ಸಂಘರ್ಷ ಸಮಿತಿಗಳು ಒಂದಾಗಬೇಕಿದೆ. ನೂರಾರು ದಲಿತ ವಿದ್ಯಾರ್ಥಿ ಸಂಘಟನೆಗಳು ಒಂದಾಗಿ ಸರ್ಕಾರದ ವಿರುದ್ಧ ಶಾಂತಿಯುತ ಹೋರಾಟಕ್ಕೆ ಮುಂದಾಗಬೇಕಿದೆ. ದಲಿತರ ಹಕ್ಕನ್ನು ಒಂದೆಡೆ ಕಿತ್ತುಕೊಳ್ಳಲಾಗುತ್ತಿದೆ. ಇನ್ನೊಂದೆಡೆ ಮೀಸಲಾತಿಗೆ ಅನರ್ಹವಾಗಿರುವವರಿಗೆ ಮೀಸಲಾತಿ ನೀಡಲು ಸರ್ಕಾರ ಮುಂದಾಗುತ್ತಿದೆ.

ಮೀಸಲಾತಿ ಎನ್ನುವುದು ಸಾಮಾಜಿಕ ಅಸಮಾನತೆಯನ್ನು  ಹೋಗಲಾಡಿಸಲು ಇರುವ ಒಂದು ಅಸ್ತ್ರವಾಗಿದೆ. ಜಾತಿಯ ಕಾರಣಕ್ಕಾಗಿ ಶೋಷಣೆಗೊಳಪಟ್ಟು, ಸಮಾಜದಲ್ಲಿ ಅಭಿವೃದ್ಧಿ ಹೊಂದದ ಸಮುದಾಯಗಳಿಗೆ ಮೀಸಲಾತಿ ನೀಡಲಾಗಿದೆ. ಆದರೆ, ಇದೀಗ ಮೀಸಲಾತಿ ಎಂದರೆ, ಆರ್ಥಿಕವಾಗಿ ಹಿಂದುಳಿದವರಿಗೆ ನೀಡುತ್ತಿರುವ ಸವಲತ್ತು ಎಂಬಂತೆ ಬಿಂಬಿಸಲಾಗುತ್ತಿದೆ. ಮೀಸಲಾತಿ ಎನ್ನುವುದು ಬಡತನ ನಿವಾರಣೆ ಕಾರ್ಯಕ್ರಮವಲ್ಲ,ಅದು ಅಸಮಾನತೆಯನ್ನು ಹೋಗಲಾಡಿಸುವ ಕಾರ್ಯಕ್ರಮವಾಗಿದೆ. ಇದನ್ನು ದೇಶಕ್ಕೆ ತಿಳಿಸಲು ಸಮುದಾಯ ಮುಂದಾಗಬೇಕಿದೆ.

ಇತ್ತೀಚಿನ ಸುದ್ದಿ