ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ- ನಾ ದಿವಾಕರ - Mahanayaka
10:53 PM Thursday 21 - November 2024

ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ- ನಾ ದಿವಾಕರ

28/02/2021

ಒಂದು ಸ್ವಸ್ಥ ಸಮಾಜ ತನ್ನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು, ಮುಂದಿನ ಪೀಳಿಗೆಗೆ ಆರೋಗ್ಯಕರ ನೆಲೆಗಳನ್ನು ಬಿಟ್ಟುಹೋಗಲು ಬಯಸುವುದು ಸಹಜ. ಮಾನವ ಸಮಾಜದ ಅಭ್ಯುದಯದ ಹಾದಿಯಲ್ಲಿ ಈ ಸ್ವಾಸ್ಥ್ಯ ಸಂರಕ್ಷಣೆಯ ಪ್ರಯತ್ನಗಳು ನಡೆಯುತ್ತಾ ಬಂದಿರುವುದರಿಂದಲೇ ಮನುಕುಲ ಇಂದಿಗೂ ಸಹ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡುಬಂದಿದೆ. ಒಬ್ಬ ಹಿಟ್ಲರಿಗೆ ನೂರಾರು ಗಾಂಧಿ ಮಂಡೇಲಾಗಳು ಹುಟ್ಟಿಕೊಳ್ಳುತ್ತಾ ಬಂದಿದ್ದಾರೆ. ಒಬ್ಬ ಮುಸೋಲಿನಿಗೆ ನೂರಾರು ಅಂಬೇಡ್ಕರುಗಳು ಉದಯಿಸುತ್ತಾ ಬಂದಿದ್ದಾರೆ. ಮತಾಂಧನೊಬ್ಬನಿಂದ ಹತ್ಯೆಗೀಡಾದರೂ ಗಾಂಧಿ ಬೌದ್ಧಿಕವಾಗಿ ನಮ್ಮ ನಡುವೆ ಇದ್ದಾರೆ. ಭಾರತದ ಮೇಲ್ಜಾತಿ ಮನಸುಗಳಿಂದ ಬಹಿಷ್ಕೃತರಾಗಿದ್ದರೂ ಪೆರಿಯಾರ್, ಅಂಬೇಡ್ಕರ್ ಇಂದು ಭಾರತೀಯ ಸಮಾಜದ ಅಂತಃಸತ್ವದ ಬುನಾದಿಯಾಗುತ್ತಾರೆ. ಸಾಂಸ್ಕೃತಿಕ ರಾಜಕಾರಣದ ರಾಯಭಾರಿಗಳ ಗುಂಡೇಟಿಗೆ ಬಲಿಯಾದರೂ ಧಬೋಲ್ಕರ್, ಪನ್ಸಾರೆ, ಗೌರಿ, ಕಲಬುರ್ಗಿ ನಮ್ಮ ನಡುವೆ ಚಿಂತನೆಗಳ ರೂಪದಲ್ಲಿ ಜೀವಂತಿಕೆಯಿಂದಿದ್ದಾರೆ.

ಸಮಾಜದಲ್ಲಿ ಅಂತರ್ಗತವಾಗಿರುವ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿ ಬೆಳೆಸಲು ಈ ಚಿಂತಕರ ಚಿಂತನೆಗಳು, ಬೋಧನೆಗಳು ಸುಭದ್ರ ಬುನಾದಿಯನ್ನು ನಿರ್ಮಿಸುತ್ತವೆ. ಶತಮಾನಗಳ ಹಿಂದೆ ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿದ್ದ ಅಸಮಾನತೆ, ಅಸಹಿಷ್ಣುತೆ ಮತ್ತು ಜಾತಿ ಶ್ರೇಷ್ಠತೆಯ ಚಿಂತನೆಗಳಿಗೆ ಪ್ರತಿರೋಧದ ರೂಪದಲ್ಲೇ ಭಾರತದಲ್ಲಿ ಜೈನ, ಬೌದ್ಧ, ಸಿಖ್ ಧರ್ಮಗಳು ಉದಯಿಸಿದ್ದವು. ಸಾಂಪ್ರದಾಯಿಕ ಸಮಾಜದ, ವೈದಿಕ ಪರಂಪರೆಯ ಡಂಭಾಚಾರ, ಶೋಷಣೆ, ಕಂದಾಚಾರಗಳ ವಿರುದ್ಧ ಭಕ್ತಿ ಪಂಥ, ಸೂಫಿ ಪರಂಪರೆಗಳು ಹುಟ್ಟಿಕೊಂಡಿದ್ದವು. ಈ ಪ್ರತಿರೋಧದ ದನಿಗಳು ಇಂದಿಗೂ ನಮ್ಮ ನಡುವೆ ಜೀವಂತವಾಗಿದ್ದರೆ ಅದರ ಹಿಂದೆ ಅನೇಕ ಸಮಕಾಲೀನ ಚಿಂತಕರ, ಸಾಹಿತಿಗಳ ಮತ್ತು ಸಮಾಜ ಸುಧಾರಕರ  ಪರಿಶ್ರಮ ಇದೆ.

ಬುದ್ಧನಿಂದ ಗಾಂಧಿ ಅಂಬೇಡ್ಕರ್ ವರೆಗೆ ಈ ಚಿಂತನಾ ವಾಹಿನಿಗಳು ಭಾರತೀಯ ಸಮಾಜಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸಿವೆ. ಸಾವಿರಾರು ಭಾಷೆಗಳು, ನೂರಾರು ಸಂಸ್ಕೃತಿಗಳು ಭಾರತೀಯ ಸಮಾಜದ ವೈವಿಧ್ಯತೆಯನ್ನು, ಬಹುಸಂಸ್ಕೃತಿಯ ನೆಲೆಗಳನ್ನು ಕಾಪಾಡಿಕೊಂಡು ಬಂದಿದ್ದರೆ ಅದಕ್ಕೆ ಕಾರಣ ಈ ಮಹಾನ್ ಚಿಂತಕರು ಬಿಟ್ಟುಹೋಗಿರುವ, ಕೊಟ್ಟುಹೋಗಿರುವ ಟೂಲ್‍ಕಿಟ್‍ಗಳು. ಭಾರತದ ಫ್ಯಾಸಿಸ್ಟ್ ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ, ವಂದಿಮಾಗಧ ಸುದ್ದಿಮನೆಗಳ ದೃಷ್ಟಿಯಲ್ಲಿ ರಾಜದ್ರೋಹದ ಅಸ್ತ್ರದಂತೆ ಕಾಣುವ ಒಂದು ಸಾಧಾರಣ ಟೂಲ್‍ಕಿಟ್ ದಿಶಾ ರವಿ ಎಂಬ 21 ವರ್ಷದ ಪರಿಸರವಾದಿಯನ್ನು ದೇಶದ್ರೋಹಿಯನ್ನಾಗಿ ಮಾಡುತ್ತದೆ. ಆದರೆ ಇಂತಹ ನೂರಾರು ಟೂಲ್‍ಕಿಟ್‍ಗಳೇ ಭಾರತದಲ್ಲಿ ಪ್ರಜಾತಂತ್ರ ಮೌಲ್ಯಗಳನ್ನು ಸಂರಕ್ಷಿಸಿಕೊಂಡುಬಂದಿದೆ.

ದೆಹಲಿಯಲ್ಲಿ ನಡೆಯುತ್ತಿರುವ ರೈತ ಮುಷ್ಕರವನ್ನು ಬೆಂಬಲಿಸುವ ಒಂದು ಟೂಲ್‍ಕಿಟ್ 136 ಕೋಟಿ ಜನತೆಯನ್ನು ಪ್ರತಿನಿಧಿಸುವ ಒಂದು ಚುನಾಯಿತ ಸರ್ಕಾರವನ್ನು ವಿಚಲಿತಗೊಳಿಸುತ್ತದೆ ಎಂದರೆ ನಮ್ಮನ್ನು ಆಳುವ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ದೆಹಲಿಯ ಪೊಲೀಸರು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದ್ದ ಒಬ್ಬ ಹೋರಾಟಗಾರ್ತಿಯನ್ನು ರಾತ್ರೋರಾತ್ರಿ ಬಂಧಿಸುತ್ತಾರೆ, ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಯಾವುದೇ ಸುಳಿವು ನೀಡದೆ ಆಕೆಯನ್ನು ದೆಹಲಿಗೆ ಕರೆದೊಯ್ಯುತ್ತಾರೆ. ಒಂದು ಒಕ್ಕೂಟ ವ್ಯವಸ್ಥೆಯಲ್ಲಿ, ಗಣತಂತ್ರದ ಚೌಕಟ್ಟಿನಲ್ಲಿ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಮ್ಮನ್ನು ಕಾಡದೆ ಹೋದರೆ ನಾವು ಪ್ರಜ್ಞಾಶೂನ್ಯರಾಗಿದ್ದೇವೆ ಎಂದೇ ಭಾವಿಸಬೇಕಾಗುತ್ತದೆ.




ದೆಹಲಿಯಲ್ಲಿ ನಡೆಯುತ್ತಿರುವ ರೈತರ ಮುಷ್ಕರ ಮೂರು ತಿಂಗಳು ಪೂರೈಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಷ್ಟು ದೀರ್ಘಕಾಲಿಕ ಮುಷ್ಕರ ಈವರೆಗೂ ಕಂಡಿರಲಿಲ್ಲ. ಹಾಗೆಯೇ ಮುಷ್ಕರನಿರತರಲ್ಲಿನ ಈ ಪ್ರಮಾಣದ ಬದ್ಧತೆ ಮತ್ತು ಆತ್ಮಸ್ಥೈರ್ಯವನ್ನೂ ಭಾರತ ಕಂಡಿರಲಿಲ್ಲ. ಮತ್ತೊಂದು ಮಜಲಿನಲ್ಲಿ ನೋಡಿದಾಗ ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ಈ ರೀತಿಯ ನಿಷ್ಕ್ರಿಯ, ನಿರ್ದಯಿ ಮತ್ತು ನಿರ್ಲಕ್ಷ್ಯ ಸರ್ಕಾರವನ್ನೂ ಈವರೆಗೂ ನಾವು ಕಂಡಿರಲಿಲ್ಲ. ಇವೆಲ್ಲದರ ನಡುವೆ ಕೇಂದ್ರ ಸರ್ಕಾರ ರೈತ ಮುಷ್ಕರದ ನೈತಿಕ ಉದ್ದೇಶವನ್ನೇ ಪ್ರಶ್ನಿಸುತ್ತಿದ್ದು ಸರ್ಕಾರ ಜಾರಿಗೊಳಿಸಿರುವ ಅಸಾಂವಿಧಾನಿಕ ಕರಾಳ ಮರಣ ಶಾಸನಗಳನ್ನು ವಿರೋಧಿಸುವುದನ್ನೇ ರಾಜದ್ರೋಹ ಎಂದು ಪರಿಗಣಿಸುತ್ತಿದೆ. ಮುಷ್ಕರವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಅನುಸರಿಸಿದ ಕ್ರೂರ, ಅಸಾಂವಿಧಾನಿಕ ಕುಟಿಲೋಪಾಯಗಳು ವಿಫಲವಾದ ನಂತರ ಈಗ ಈ ಮುಷ್ಕರವನ್ನು ಬೆಂಬಲಿಸುವ ದನಿಗಳನ್ನೇ ಶಾಶ್ವತವಾಗಿ ಅಡಗಿಸುವ ಪ್ರಯತ್ನಗಳು ನಡೆಯುತ್ತಿವೆ. ದಿಶಾರವಿ ಇಂತಹ ಕುತಂತ್ರಕ್ಕೆ ಬಲಿಯಾದ ಪರಿಸರ ಹೋರಾಟಗಾರ್ತಿ.

ಕೆನಡಾದಲ್ಲಿ 2020ರ ಮಾರ್ಚ್ ತಿಂಗಳಲ್ಲಿ ಸ್ಥಾಪಿಸಲಾದ ಪೋಯೆಟಿಕ್ ಜಸ್ಟಿಸ್ ಫೌಂಡೇಷನ್ ಮೂಲತಃ ಜಗತ್ತಿನಾದ್ಯಂತ ನಡೆಯುವ ಜನಾಂದೋಲನಗಳನ್ನು, ಪರಿಸರ ಹೋರಾಟಗಳನ್ನು ಮತ್ತು ಹಕ್ಕೊತ್ತಾಯಗಳ ಹೋರಾಟಗಳನ್ನು ಬೆಂಬಲಿಸುವ ಒಂದು ಸಂಸ್ಥೆ. ದೆಹಲಿ ಪೊಲೀಸರು ಆರೋಪಿಸಿರುವಂತೆ ಇದು ಖಲಿಸ್ತಾನಿ ಬೆಂಬಲಿಗ ಸಂಘಟನೆ ಎಂದು ನಿರೂಪಿಸಲು ಯಾವುದೇ ಪುರಾವೆಗಳಿಲ್ಲ. ಸಾಮಾಜಿಕ ಮಾಧ್ಯಮಗಳು ಹೆಚ್ಚು ಪ್ರಚಲಿತವಾದ ನಂತರ ಇಂತಹ ಜಾಗತಿಕ ವೇದಿಕೆಗಳು ವಿಶ್ವದಾದ್ಯಂತ ನಡೆಯುವ ಜನಾಂದೋಲನಗಳಿಗೆ ಪ್ರೋತ್ಸಾಹ, ಬೆಂಬಲ ವ್ಯಕ್ತಪಡಿಸಲು ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುತ್ತವೆ. ಈ ಸೂತ್ರಗಳ ಮೂಲಕ ಹೋರಾಟಗಳನ್ನು ಹೇಗೆ ಮುನ್ನಡೆಸಬೇಕು, ಜನರನ್ನು ಹೇಗೆ ಕ್ರೋಢೀಕರಿಸಬೇಕು ಎಂದು ಸೂಚಿಸಲಾಗುತ್ತದೆ. ಇದನ್ನು ಟೂಲ್‍ಕಿಟ್ ಎಂದು ಕರೆಯಲಾಗುತ್ತದೆ. ಅಂದರೆ ಹೋರಾಟದ ಅಸ್ತ್ರಗಳನ್ನೊಳಗೊಂಡ ಒಂದು ಆಕರ. ಇಲ್ಲಿ ಮೌಖಿಕ, ಲಿಖಿತ, ಸಾಂಕೇತಿಕ ಸೂಚನೆಗಳಿರುತ್ತವೆಯೇ ಹೊರತು ಶಸ್ತ್ರಾಸ್ತ್ರಗಳ ಸುಳಿವೂ ಇರುವುದಿಲ್ಲ.

ಭಾರತದಲ್ಲಿ ನಡೆಯುತ್ತಿರುವ ರೈತ ಮುಷ್ಕರದ ಬಗ್ಗೆಯೂ  ಸಹ ಇಂತಹುದೇ ಟೂಲ್‍ಕಿಟ್ ಒಂದನ್ನು ಸಿದ್ಧಪಡಿಸಲಾಗಿದ್ದು ಇದರಲ್ಲಿ ಮುಷ್ಕರ ನಿರತ ರೈತರು ಅನುಸರಿಸಬೇಕಾದ ಅಹಿಂಸಾತ್ಮಕ ಕಾರ್ಯ ಚಟುವಟಿಕೆಗಳನ್ನು ಸೂಚಿಸಲಾಗಿದೆ. ಟ್ವೀಟ್‍ಗಳ ಮೂಲಕ ಪ್ರತಿಭಟಿಸುವುದು, ಅರ್ಜಿಗಳನ್ನು ಸಲ್ಲಿಸುವುದು, ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಧರಣಿ ನಡೆಸುವುದು ಹೀಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಭಾರತದ ಎಂಬೆಸಿ ಕಚೇರಿಯ ಮುಂದೆ ಧರಣಿ ನಡೆಸಲು ಸೂಚಿಸುವುದು , ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸಲು ಸೂಚಿಸುವುದು ಸಂವಿಧಾನವಿರೋಧಿಯೂ ಆಗುವುದಿಲ್ಲ, ದೇಶದ್ರೋಹವೂ ಆಗುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾರ್ವಭೌಮ ಪ್ರಜೆಗಳಿಗೆ ಈ ಹಕ್ಕು ಇರುತ್ತದೆ ಎನ್ನುವುದನ್ನು ನಾವು ಗಮನಿಸಬೇಕು.

ಜನವರಿ 26ರಂದು ರೈತರ ಟ್ರಾಕ್ಟರ್ ಪರೇಡ್ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಟೂಲ್‍ಕಿಟ್ ಮತ್ತು ಇತರ ಸಂಘಟಕರನ್ನು ಅನುಮಾನಾಸ್ಪದವಾಗಿ ನೋಡುತ್ತಿದೆ. ಆದರೆ ಕೆಂಪುಕೋಟೆಯಲ್ಲಿ ನಡೆದ ಘಟನೆ ಯಾವುದೇ ಒಂದು ಬೃಹತ್ ಜನಾಂದೋಲನದ ಸಂದರ್ಭದಲ್ಲಿ ಸಹಜವಾಗಿ ನಡೆಯುವಂತಹುದೇ ಆಗಿದ್ದು, ಭಾರತದ ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ ಎನ್ನುವ ಆರೋಪಗಳೂ ಸಹ ಹುಸಿ ಎಂದು ಸಾಬೀತಾಗಿದೆ. ರೈತ ಮುಷ್ಕರವನ್ನು ಸಾರ್ವಜನಿಕರ ದೃಷ್ಟಿಯಲ್ಲಿ ತಪ್ಪಾಗಿ ತೋರಿಸುವ ಒಂದು ಹುನ್ನಾರವನ್ನೂ ಈ ಘಟನೆಗಳಲ್ಲಿ ಕಾಣಬಹುದಾಗಿದೆ.  ಆದರೆ ಈ ಘಟನೆಗಳನ್ನು ನೆಪವಾಗಿಟ್ಟುಕೊಂಡೇ ಕೇಂದ್ರ ಸರ್ಕಾರ ರೈತ ಮುಷ್ಕರದ ಪರ ವಹಿಸುವ ಪ್ರಜಾಸತ್ತಾತ್ಮಕ ದನಿಗಳನ್ನು ಅಡಗಿಸಲು ಪ್ರಯತ್ನಿಸುತ್ತಿದೆ. ದಿಶಾ ರವಿ ಪ್ರಕರಣದಲ್ಲಿ ಇದರ ಉದ್ದೇಶ ಸ್ಪಷ್ಟವಾಗಿ ಕಾಣುತ್ತದೆ.

ಫ್ರೈಡೇಸ್ ಫಾರ್ ಫ್ಯೂಚರ್ ಪ್ರಚಾರಾಂದೋಲನ ಎನ್ನುವ ಒಂದು ಟೂಲ್‍ಕಿಟ್ ಸಂಪಾದಿಸುವಲ್ಲಿ ದಿಶಾರವಿ ಪಾತ್ರವಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ಈ ಟೂಲ್‍ಕಿಟ್ ಸಿದ್ಧಪಡಿಸಿದ ಖ್ಯಾತ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‍ಬರ್ಗ್ ಜಾಗತಿಕ ಮಟ್ಟದಲ್ಲೇ ಭಾರತದ ರೈತರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇವರು ಸಿದ್ಧಪಡಿಸಿರುವ ಟೂಲ್‍ಕಿಟ್ ಸಾರ್ವಜನಿಕ ಓದಿಗೂ ಲಭ್ಯವಿದ್ದು, ಅದರಲ್ಲಿ ಹೋರಾಟದ ರೂಪುರೇಷೆಗಳನ್ನು ಹೊರತುಪಡಿಸಿ ಮತ್ತಾವುದೇ ಸಂವಿಧಾನವಿರೋಧಿ ಸಂದೇಶಗಳಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಈ ಟೂಲ್‍ಕಿಟ್‍ನಲ್ಲಿನ ಕೆಲವು ಅಂಶಗಳನ್ನು ತಾನು ಸಂಪಾದಿಸಿರುವುದಾಗಿ ದಿಶಾರವಿ ಒಪ್ಪಿಕೊಂಡಿದ್ದಾರೆ ಆದರೆ ಈ ಚಟುವಟಿಕೆಯನ್ನೇ ಆಧರಿಸಿ ಆಕೆಯನ್ನು ರಾಜದ್ರೋಹದ ಕಾಯ್ದೆಯಡಿ ಬಂಧಿಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ. ಒಂದು ವೇಳೆ ಇಡೀ ಟೂಲ್ ಕಿಟ್ ದಿಶಾ ರವಿ ಅವರಿಂದಲೇ ರಚಿಸಲ್ಪಟ್ಟಿದ್ದರೂ ಅಪರಾಧವೇನೂ ಆಗುವುದಿಲ್ಲ.

protest

 

ಟೂಲ್ ಕಿಟ್ ನಲ್ಲಿ ಏನಿದೆ ?

ಭಾರತದಲ್ಲಿ ನಡೆಯುತ್ತಿರುವ ರೈತ ಮುಷ್ಕರಕ್ಕೆ ಬೆಂಬಲ ಸೂಚಿಸಲು ಗ್ರೇಟಾ ಥನ್‍ಬರ್ಗ್ ಸಿದ್ಧಪಡಿಸಿರುವ ಟೂಲ್‍ಕಿಟ್‍ನಲ್ಲಿ ಭಾರತ ಸರ್ಕಾರದ ಹೊಸ ಕೃಷಿ ಮಸೂದೆಗಳನ್ನು ರೈತ ವಿರೋಧಿ ಎಂದು ಗುರುತಿಸಲಾಗಿದ್ದು, ಈ ಕಾಯ್ದೆಗಳು ನವ ಉದಾರವಾದಿ ಆರ್ಥಿಕ ನೀತಿಗಳ ಪರಿಣಾಮವಾಗಿ ಮೂಡಿಬಂದಿರುವುದನ್ನು ಸ್ಪಷ್ಟಪಡಿಸಲಾಗಿದೆ.  ರೈತರನ್ನು ಸಂಪರ್ಕಿಸದೆ, ಸಂಸತ್ತಿನಲ್ಲಿ ಚರ್ಚೆ ನಡೆಸದೆ ಈ ಕಾಯ್ದೆಗಳನ್ನು ಜಾರಿಗೊಳಿಸಿರುವುದನ್ನೂ ಟೂಲ್‍ಕಿಟ್‍ನಲ್ಲಿ ಉಲ್ಲೇಖಿಸಲಾಗಿದೆ. ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ವಹಿಸುವುದರಿಂದ ಪರಿಸರ ವಿನಾಶಕ್ಕೂ ದಾರಿಮಾಡಿಕೊಟ್ಟಂತಾಗುತ್ತದೆ ಎನ್ನುವ ಅಂಶವನ್ನೂ ಉಲ್ಲೇಖಿಸಲಾಗಿದೆ. ಈ ನಿಟ್ಟಿನಲ್ಲಿ ರೈತ ಮುಷ್ಕರಕ್ಕೆ ಭಾರತದ ಜನತೆ ಮತ್ತು ವಿಶ್ವದ ಇತರ ರಾಷ್ಟ್ರಗಳ ಜನತೆ ಹೇಗೆ ಪ್ರತಿಕ್ರಯಿಸಬೇಕು ಎನ್ನುವುದನ್ನು ಟೂಲ್‍ಕಿಟ್‍ನಲ್ಲಿ ವಿವರಿಸಲಾಗಿದೆ. ರೈತರಿಗೆ ಬೆಂಬಲಿಸಿ ಟ್ವೀಟ್ ಮಾಡುವುದು,  ಹ್ಯಾಷ್‍ಟ್ಯಾಗ್ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಬಲ ವ್ಯಕ್ತಪಡಿಸುವುದು, ಸರ್ಕಾರದ ಪ್ರತಿನಿಧಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಇ ಮೇಲ್ ಕಳಿಸುವುದು, ಫೆಬ್ರವರಿ 13-14ರಂದು ಭಾರತೀಯ ರಾಯಭಾರ ಕಚೇರಿಯ ಮುಂದೆ, ಸ್ಥಳೀಯ ಸರ್ಕಾರಿ ಕಚೇರಿಗಳ ಮುಂದೆ ಧರಣಿ ನಡೆಸುವುದು, ಸತತ ಟ್ವೀಟ್ ಮಾಡುವುದು,  ಮುಖ್ಯ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಹೀಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಇದರ ಪೂರ್ಣ ವಿವರಗಳು ಇಲ್ಲಿ ಲಭ್ಯವಿದೆ : https://ruralindiaonline.org/en/stories/categories/farming-and-its-crisis/

 

ಈ ಟೂಲ್‍ಕಿಟ್ ಆಧಾರದಲ್ಲೇ ದಿಶಾ ರವಿ ಅವರನ್ನು ಬಂಧಿಸಲಾಗಿದ್ದು ಇದೀಗ ದೆಹಲಿಯ  ಪಟಿಯಾಲಾ ನ್ಯಾಯಾಲಯದಲ್ಲಿ ಆಕೆಗೆ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಧರ್ಮೇಂದ್ರ ರಾಣಾ ಅವರು ವ್ಯಕ್ತಪಡಿಸಿರುವ ಕೆಲವು ಅಭಿಪ್ರಾಯಗಳು ಇಂದಿನ ಸಂದರ್ಭದಲ್ಲಿ ಬಹಳ ಮುಖ್ಯವಾಗುತ್ತದೆ.  ಎಲ್ಗಾರ್ ಪರಿಷತ್ ಮತ್ತು ಭೀಮಾ ಕೊರೆಗಾಂವ್ ಘಟನೆಯ ಹಿನ್ನೆಲೆಯಲ್ಲಿ ಹಲವಾರು ವಕೀಲರನ್ನು, ಬರಹಗಾರರನ್ನು, ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಇವರ ವಿರುದ್ಧ ಯುಎಪಿಎ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ. ರಾಜದ್ರೋಹ ಕಾಯ್ದೆ ಸೆಕ್ಷನ್ 124ಎ ಮತ್ತು ಯುಎಪಿಎ, ಈ ಎರಡು ಕರಾಳ ಶಾಸನಗಳು ಪ್ರತಿರೋಧದ ದನಿಗಳನ್ನು ಅಡಗಿಸುವ ಅಸ್ತ್ರಗಳಾಗಿ ಪರಿಣಮಿಸಿರುವುದು ಭಾರತೀಯ ಪ್ರಜಾತಂತ್ರದ ದುರಂತ.

ದಿಶಾ ರವಿಯವರ ಬಂಧನದ ಹಿಂದೆ ದೇಶದ ಯುವ ಸಮುದಾಯದ ಜಾಗೃತ ಪ್ರಜ್ಞೆಯನ್ನು ಕುಡಿಯಲ್ಲೇ ಚಿವುಟುವ ಹುನ್ನಾರವನ್ನೂ ಗುರುತಿಸಬಹುದಾಗಿದೆ. ಇಂದು ದೇಶ ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳಿಗೆ ಮೋದಿ ಸರ್ಕಾರದ ಆಡಳಿತ ನೀತಿಗಳೇ ಕಾರಣ ಎನ್ನುವುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ, ಉತ್ಪಾದನೆಯ ಕೊರತೆ, ಅಭಿವೃದ್ಧಿ ಸೂಚ್ಯಂಕದಲ್ಲಿ ಕುಸಿತ, ಉದ್ಯೋಗ ಸೃಷ್ಟಿಯಲ್ಲಿನ ವೈಫಲ್ಯ, ತೈಲ  ಮತ್ತು ಅವಶ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು ಮತ್ತು ಹಣಕಾಸು ಬಿಕ್ಕಟ್ಟು ಜನಸಾಮಾನ್ಯರನ್ನು ಬಾಧಿಸುತ್ತಿದೆ. ಈ ಗಂಭೀರ ಸಮಸ್ಯೆಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಯಥಾಸ್ಥಿತಿಯಲ್ಲಿದ್ದರೆ ಅದಕ್ಕೆ ಕಾರಣ ಯುವ ಸಮುದಾಯವನ್ನು ಆವರಿಸಿರುವ ಸಮೂಹ ಸನ್ನಿ ಮತ್ತು ಮಧ್ಯಮ, ಮೇಲ್ ಮಧ್ಯಮ ವರ್ಗವನ್ನು ಆವರಿಸಿರುವ ಅಂಧ ಶ್ರದ್ಧೆ.

ಈ ಸಮೂಹ ಸನ್ನಿಗೊಳಗಾಗಿರುವ ಯುವಸಮುದಾಯದ ಒಂದು ವರ್ಗ ಇತ್ತೀಚಿನ ದಿನಗಳಲ್ಲಿ ಜಾಗೃತವಾಗುತ್ತಿದೆ. ರೈತ ಮುಷ್ಕರದ ಹಿನ್ನೆಲೆಯಲ್ಲಿ ಉತ್ತರದ ಹಲವು ರಾಜ್ಯಗಳಲ್ಲಿ ಜನಾಭಿಪ್ರಾಯ ಬದಲಾಗುತ್ತಿದೆ. ಭ್ರಮನಿರಸನಗೊಂಡ ಯುವ ಸಮುದಾಯ ಭಿನ್ನ ನೆಲೆಯಲ್ಲಿ ಯೋಚಿಸಲಾರಂಭಿಸಿದೆ. ಈ ಜಾಗೃತ ಮನಸುಗಳನ್ನು ಪುನಃ ಪರಿವರ್ತಿಸುವುದು ಇಂದಿನ ದುಸ್ಥಿತಿಯಲ್ಲಿ ಕಷ್ಟ ಎನ್ನುವುದೂ ಮೋದಿ ಸರ್ಕಾರಕ್ಕೆ ತಿಳಿದಿದೆ. ಹಾಗಾಗಿ ಯುವ ಮನಸುಗಳಲ್ಲಿ ಭೀತಿ ಉಂಟುಮಾಡುವ ಉದ್ದೇಶದಿಂದಲೇ 21 ವರ್ಷದ ಪರಿಸರ ಹೋರಾಟಗಾರ್ತಿ ದಿಶಾರವಿ ವಿರುದ್ಧ ರಾಜದ್ರೋಹದಂತಹ ಗಂಭೀರ ಆರೋಪ ಹೊರಿಸಿ ಬಂಧಿಸಲಾಗುತ್ತದೆ. ಇದು ಜನಸಾಮಾನ್ಯರಲ್ಲಿ ಭೀತಿ ಸೃಷ್ಟಿಸಿ ಜಾಗೃತಿಗೆ ಧಕ್ಕೆ ಉಂಟುಮಾಡುವ ತಂತ್ರಗಾರಿಕೆ ಎನ್ನುವುದು ಸುಸ್ಪಷ್ಟ.

ಸ್ವತಂತ್ರ ಆಲೋಚನೆಗೆ ಅವಕಾಶವೇ ನೀಡದೆ ಅಧಿಪತ್ಯ ರಾಜಕಾರಣವನ್ನು ಬಲಪಡಿಸುವ ನಿಟ್ಟಿನಲ್ಲಿ ಮೋದಿ-ಶಾ ಜೋಡಿ ಹಲವು ವ್ಯೂಹಗಳನ್ನು ರಚಿಸುತ್ತಿದ್ದು, ದಿಶಾರವಿಯ ಪ್ರಕರಣವೂ ಇಂತಹುದೇ ಪ್ರಯತ್ನವಾಗಿದೆ. ಮಾಧ್ಯಮಗಳು ವಂದಿಮಾಗಧ ಸಂಸ್ಕೃತಿಯ ಶಿಖರ ತಲುಪಿರುವ ಹೊತ್ತಿನಲ್ಲಿ ಸರ್ಕಾರದ ತಪ್ಪುಒಪ್ಪುಗಳನ್ನು ಪರಾಮರ್ಶಿಸುವ ಅವಕಾಶವೇ ಇಲ್ಲವಾಗಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿ ಯುವ ಸಮುದಾಯದ ಸ್ವತಂತ್ರ ಆಲೋಚನೆ ಪ್ರಜಾತಂತ್ರ ಮೌಲ್ಯಗಳ ರಕ್ಷಣೆಗೆ ಅತ್ಯವಶ್ಯವಾಗಿರುತ್ತದೆ. ಈ ಬೆಳವಣಿಗೆಗೆ ಅವಕಾಶ ನೀಡದಿರಲು ಸರ್ಕಾರ ಕರಾಳ ಶಾಸನಗಳ ಮೊರೆ ಹೋಗುತ್ತಿದೆ. ಭಾರತದ ಬಹುತ್ವ ಸಂಸ್ಕೃತಿಯನ್ನು ಮತ್ತು ಬಹುಮುಖೀ ಸಾಂಸ್ಕೃತಿಕ ನೆಲೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ಮುಂದಿನ ಪೀಳಿಗೆಗೆ ರವಾನಿಸುವ ಗುರುತರ ಹೊಣೆ ಹೊತ್ತಿರುವ ಯುವ ಸಮುದಾಯದ ಮೇಲೆ ಕರಾಳ ಶಾಸನಗಳ ಪ್ರಹಾರದ ಮೂಲಕ ಒತ್ತಡ ಹೇರುವ ತಂತ್ರವನ್ನು ನಾವಿಂದು ನೋಡುತ್ತಿದ್ದೇವೆ.

ಈ ಹಿನ್ನೆಲೆಯಲ್ಲಿ ದಿಶಾರವಿ ಜಾಮೀನು ತೀರ್ಪಿನಲ್ಲಿ ಪಟಿಯಾಲಾ ನ್ಯಾಯಾಲಯದ ನ್ಯಾಯಮೂರ್ತಿ ಧರ್ಮೇಂದ್ರರಾಣಾ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಸಾರ್ವಕಾಲಿಕ ಮಾನ್ಯತೆ ಪಡೆಯುತ್ತವೆ. ಇದೇ ನ್ಯಾಯಮೂರ್ತಿಗಳು ಈ ಹಿಂದೆ ಜೆಎನ್‍ಯು ವಿದ್ಯಾರ್ಥಿನಿ ಸಫೂರ ಜರ್ಗರ್ ಪ್ರಕರಣದಲ್ಲಿ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ದಿಶಾರವಿ ಪ್ರಕರಣದ ತೀರ್ಪು ಇಂದಿನ ಸಂದರ್ಭದಲ್ಲಿ ಸ್ವಾಗತಾರ್ಹ ಎನಿಸುತ್ತದೆ. ನ್ಯಾ ಧರ್ಮೇಂದ್ರ ರಾಣಾ ತಮ್ಮ ತೀರ್ಪಿನಲ್ಲಿ ಹೀಗೆ ಹೇಳಿದ್ದಾರೆ:-

 “ ಒಬ್ಬ ವ್ಯಕ್ತಿಯು ಕೆಲವು ಸಂಶಯಾಸ್ಪದ ವ್ಯಕ್ತಿಗಳ ಜೊತೆಗೆ ಸಂಪರ್ಕದಲ್ಲಿದ್ದ ಮಾತ್ರಕ್ಕೆ ಆ ವ್ಯಕ್ತಿಯ ಎಲ್ಲ ಚಟುವಟಿಕೆಗಳನ್ನೂ ಸಂಶಯಾಸ್ಪದವಾಗಿ ನೋಡುವ ಅಗತ್ಯವಿಲ್ಲ , ಕಾನೂನಿನ ಚೌಕಟ್ಟಿನೊಳಗೆ ನಡೆಸುವ ಚಟುವಟಿಕೆಗಳನ್ನು ಆಧರಿಸಿ ಕಳಂಕ ಹೊರಿಸುವುದು ಸಮರ್ಥನೀಯವಲ್ಲ. ಸರ್ಕಾರ ಜಾರಿಗೊಳಿಸಿರುವ ಒಂದು ಶಾಸನವನ್ನು ವಿರೋಧಿಸುವ ವೇದಿಕೆ ಅಥವಾ ಸಂಘಟನೆಯನ್ನು ಬೆಂಬಲಿಸದ ಮಾತ್ರಕ್ಕೆ ಊಹಾಪೋಹಗಳನ್ನು ಆಧರಿಸಿ ಯಾರನ್ನೂ ಭಯೋತ್ಪಾದಕರಂತೆ ನೋಡುವುದು ತರವಲ್ಲ.  ಭಾರತದ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮನ್ನಣೆ ನೀಡಿದ್ದು, ಇದಕ್ಕೆ ಯಾವುದೇ ಭೌಗೋಳಿಕ ಚೌಕಟ್ಟು, ಗಡಿರೇಖೆ ಇರುವುದಿಲ್ಲ, ಜಾಗತಿಕ ಅಭಿಪ್ರಾಯ ಮೂಡಿಸಲೂ ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಬಳಸಬಹುದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರದ ಕೆಲವು ಯೋಜನೆಗಳನ್ನು, ನೀತಿಗಳನ್ನು ವಿರೋಧಿಸುವುದೇ ರಾಜದ್ರೋಹ  ಎನಿಸಿಕೊಳ್ಳುವುದಿಲ್ಲ, ಈ ಕಾರಣಕ್ಕಾಗಿ ಪ್ರಜೆಗಳನ್ನು ಜೈಲಿಗೆ ತಳ್ಳುವುದು, ಮತ್ತು ಘಾಸಿಗೊಂಡ ಸರ್ಕಾರದ ದುರಭಿಮಾನವನ್ನು ತಣಿಸಲು ರಾಜದ್ರೋಹ ಪ್ರಕರಣ ದಾಖಲಿಸುವುದು ನ್ಯಾಯಯುತವಲ್ಲ. ಭಾರತ ಸಾವಿರಾರು ವರ್ಷಗಳಿಂದ ಹಲವಾರು ಭಿನ್ನ ಚಿಂತನೆಗಳನ್ನು, ಅಭಿಪ್ರಾಯಗಳನ್ನು ಗೌರವಿಸುತ್ತಲೇ ಬಂದಿದೆ ಎಂದು ಹೇಳುತ್ತಾ ಋಗ್ವೇದದ ವಾಕ್ಯವೊಂದನ್ನು ಉದ್ಧರಿಸಿರುವ ನ್ಯಾಯಮೂರ್ತಿಗಳು, ವಾಟ್ಸಾಪ್ ಗುಂಪು ರಚಿಸುವುದು, ಟೂಲ್ ಕಿಟ್ ಸಿದ್ಧಪಡಿಸುವುದು ಶಿಕ್ಷಾರ್ಹ ಅಪರಾಧವಾಗುವುದಿಲ್ಲ ”

ರಾಜದ್ರೋಹ ಕಾಯ್ದೆಯನ್ನು ಸಂತೆಯ ಸರಕಿನಂತೆ ಬಳಸುತ್ತಿರುವ ಕೇಂದ್ರ ಸರ್ಕಾರ, ಆಡಳಿತ ನೀತಿಯ ವಿರುದ್ಧ ಮಾತನಾಡುವುದನ್ನೇ ಅಪರಾಧ ಎಂದು ಭಾವಿಸುತ್ತಿದೆ. ಸರ್ಕಾರದ ವಿರುದ್ಧ ಮಾತನಾಡುವುದನ್ನೇ ದೇಶದ್ರೋಹ ಎಂದು ಪರಿಗಣಿಸುತ್ತಿದೆ. 2010ರ ನಂತರ ದೇಶದಲ್ಲಿ 11 ಸಾವಿರ ಜನರ ವಿರುದ್ಧ 816 ರಾಜದ್ರೋಹ ಮೊಕದ್ದಮೆಗಳು ದಾಖಲಾಗಿವೆ. ಪತ್ರಕರ್ತರು, ವಿದ್ಯಾರ್ಥಿಗಳು, ವಿರೋಧಪಕ್ಷ ನಾಯಕರು, ಲೇಖಕರು, ಬೋಧಕರು, ಕಲಾವಿದರು ಈ ಕರಾಳ ಶಾಸನದಡಿ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. 2010 ರಿಂದ 2014ರ ಯುಪಿಎ ಅವಧಿಯಲ್ಲಿ 279 ಪ್ರಕರಣಗಳು ದಾಖಲಾಗಿದ್ದರೆ, 2014ರ ನಂತರ 519 ರಾಜದ್ರೋಹ ಮೊಕದ್ದಮೆಗಳು ದಾಖಲಾಗಿವೆ. ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ 144 ಜನರು ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ 149 ಮಂದಿಯ ವಿರುದ್ಧ ರಾಜದ್ರೋಹ ಪ್ರಕರಣಗಳು ದಾಖಲಾಗಿವೆ.

ಈ ಹಿನ್ನೆಲೆಯಲ್ಲಿ ದಿಶಾ ರವಿ ಪ್ರಕರಣ ಪ್ರಭುತ್ವದ ದಮನಕಾರಿ ನೀತಿಯ ಒಂದು ಆಯಾಮವಾಗಿದ್ದರೆ, ಪಟಿಯಾಲ ನ್ಯಾಯಾಲಯದ ಮಹತ್ವದ ತೀರ್ಪು ನ್ಯಾಯ ವ್ಯವಸ್ಥೆಗೆ ಚುರುಕುಮುಟ್ಟಿಸುವಂತಿದೆ. ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದಂತೆಯೂ ಇದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ದನಿಯೇ ಅಂತಿಮ ಎನ್ನುವ ಸತ್ಯವನ್ನು ಸರ್ಕಾರಕ್ಕಿಂತಲೂ ಹೆಚ್ಚಾಗಿ ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕಿದೆ. ಆಗಲಾದರೂ ಭಾರತದ ಯುವ ಸಮುದಾಯ ಸಮೂಹ ಸನ್ನಿಯಿಂದ ಮುಕ್ತವಾಗಿ ಸ್ವತಂತ್ರವಾಗಿ ಆಲೋಚಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬಹುದು.

ಇತ್ತೀಚಿನ ಸುದ್ದಿ