ಪತ್ನಿಯ ಶೀಲದ ಮೇಲೆ ಶಂಕೆ: ಜನ್ಮ ನೀಡಿದ ತಂದೆಯನ್ನೇ ಹೊಡೆದು ಕೊಂದ ಪಾಪಿ!
02/03/2021
ಬಾಗಲಕೋಟೆ: ಪತ್ನಿಯ ಮೇಲೆ ಹಲ್ಲೆ ನಡೆಸಲು ಹೋದ ಮಗನನ್ನು ತಡೆಯಲು ಬಂದ ತಂದೆಯೇ ಮಗನಿಂದ ಭೀಕರವಾಗಿ ಹತ್ಯೆಗೀಡಾದ ಘಟನೆ ಜಿಲ್ಲೆಯ ಹುನಗುಂಡ ತಾಲೂಕಿನ ಚೌಡ ಕಮಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಆರೋಪಿ ರಾಜೇಂದ್ರ ಎಂಬಾತ ಪತ್ನಿಯ ಮೇಲೆ ವಿಪರೀತ ಅನುಮಾನ ಹೊಂದಿದ್ದ ಪ್ರತೀ ದಿನ ಆಕೆಗೆ ಹಲ್ಲೆ ನಡೆಸುತ್ತಿದ್ದ. ನಿನ್ನೆ ರಾತ್ರಿ ಕೂಡ ಕಂಠಮಟ್ಟ ಮದ್ಯ ಸೇವಿಸಿ ಪತ್ನಿಯ ಮೇಲೆ ರಾಡ್ ನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ.
ಪತ್ನಿಯ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಿದ್ದ ಮಗನನ್ನು 72 ವರ್ಷದ ತಂದೆ ಶಿವಾನಂದ್ ಗೌಡರ್ ತಡೆಯಲು ಯತ್ನಿಸಿದ್ದು, ಈ ವೇಳೆ ತಂದೆಯ ಮೇಲೆ ಕೋಪಗೊಂಡ ರಾಜೇಂದ್ರ, “ನಿನಗೂ ನನ್ನ ಪತ್ನಿಗೂ ಏನು ಸಂಬಂಧ” ಎಂದು ಪ್ರಶ್ನಿಸಿ ರಾಡ್ ನಿಂದ ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ.
ವಯೋವೃದ್ಧರಾಗಿರುವ ಶಿವಾನಂದ್ ಗೌಡರ್ ರಾಡ್ ನ ಏಟಿಗೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ರಾಜೇಂದ್ರನ ಪತ್ನಿ ಲಕ್ಷ್ಮೀಬಾಯಿ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.