ಪತ್ನಿಯು ಗಂಡನ ಖಾಸಗಿ ಆಸ್ತಿ ಅಲ್ಲ | ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು - Mahanayaka

ಪತ್ನಿಯು ಗಂಡನ ಖಾಸಗಿ ಆಸ್ತಿ ಅಲ್ಲ | ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು

03/03/2021

ನವದೆಹಲಿ: ಪತ್ನಿಯು ಗಂಡನ ಖಾಸಗಿ ಆಸ್ತಿ ಅಲ್ಲ, ಹಾಗಾಗಿ ಆಕೆ ಗಂಡನೊಂದಿಗೆ ವಾಸಿಸಬೇಕು ಎಂದು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಗೋರಖ್ ಪುರ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ನ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಅರ್ಜಿದಾರ ಯುವಕ ಕಳೆದ ಕೆಲವು ವರ್ಷಗಳಿಂದ ಪತ್ನಿಯಿಂದ ದೂರವಿದ್ದು, ಈತನ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿದ ಈತನ ಪತ್ನಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಆಧಾರದಲ್ಲಿ ನ್ಯಾಯಾಲಯವು ಪತ್ನಿಗೆ ಜೀವನಾಂಶವಾಗಿ ತಿಂಗಳಿಗೆ 20 ಸಾವಿರ ರೂ. ನೀಡಬೇಕು ಎಂದು  ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿದ ಯುವಕ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದು, ತನ್ನ ಪತ್ನಿಯ ಜೊತೆಗೆ ತಾನು ವಾಸಿಸಲು ಸಿದ್ಧನಿದ್ದೇನೆ. ಹಾಗಾಗಿ ಹಿಂದೂ ವಿಶೇಷ  ವಿವಾಹ ಕಾಯ್ದೆಯಡಿ ಜೀವನಾಂಶ ಪಾವತಿಸಬೇಕಾಗಿಲ್ಲ ಎಂದು ವಾದಿಸಿದ್ದಾನೆ.

ಯುವಕನ ವಾದವನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೇಮಂತ್ ಗುಪ್ತಾ ಅವರ ವಿಭಾಗೀಯ ಪೀಠ ವಿರೋಧಿಸಿದ್ದು, ನೀವು ಯೋಚಿಸುವ ಆದೇಶಗಳನ್ನು ನೀಡಲು ಸಾಧ್ಯವಿಲ್ಲ, ಮಹಿಳೆ ನಿಮ್ಮ ಖಾಸಗಿ ಆಸ್ತಿಯೇ? ಎಂದು ಪ್ರಶ್ನಿಸಿದ ಕೋರ್ಟ್, ನೀವು ಬರಲು ಸೂಚಿಸಿದ ತಕ್ಷಣವೇ ಬರಲು ಮಹಿಳೆಯು ನಿಮ್ಮ ಖಾಸಗಿ ಆಸ್ತಿ ಅಲ್ಲ, ಹಾಗಾಗಿ ನಿಮ್ಮ ಜೊತೆಗೆ ವಾಸಿಸಬೇಕು ಎಂದು ಆಕೆಯನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

whatsapp

ಇತ್ತೀಚಿನ ಸುದ್ದಿ