ಕೋಳಿ ತ್ಯಾಜ್ಯ ವಿಲೇವಾರಿ ಗುಂಡಿ ನಿರ್ಮಾಣದ ವೇಳೆ ಮಣ್ಣಿನಡಿಯಲ್ಲಿ ಸಿಲುಕಿ ಇಬ್ಬರು ಕಾರ್ಮಿಕರ ದಾರುಣ ಸಾವು - Mahanayaka

ಕೋಳಿ ತ್ಯಾಜ್ಯ ವಿಲೇವಾರಿ ಗುಂಡಿ ನಿರ್ಮಾಣದ ವೇಳೆ ಮಣ್ಣಿನಡಿಯಲ್ಲಿ ಸಿಲುಕಿ ಇಬ್ಬರು ಕಾರ್ಮಿಕರ ದಾರುಣ ಸಾವು

04/03/2021

ಪುತ್ತೂರು: ಕೋಳಿ ತ್ಯಾಜ್ಯ ವಿಲೇವಾರಿ ಗುಂಡಿ ನಿರ್ಮಾಣದ ವೇಳೆ ಮಣ್ಣಿನಡಿಯಲ್ಲಿ ಸಿಲುಕಿ ಇಬ್ಬರು ಕಾರ್ಮಿಕರು ದಾರುಣವಾಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಅರ್ಲಪದವು  ಸಮೀಪದ ಕಡಮ್ಮಾಜೆಯಲ್ಲಿ ನಡೆದಿದೆ.

ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಕಡಮ್ಮಾಜೆ ಹಾಜಿ ಅಬ್ದುಲ್ಲ ಎಂಬವರಿಗೆ ಸೇರಿದ ಕೋಳಿ ಫಾರ್ಮ್ ನ ತ್ಯಾಜ್ಯ ವಿಲೇವಾರಿಗೆ ಜೆಸಿಬಿ ಮೂಲಕ ಹೊಂಡ ತೆಗೆಯಲಾಗುತ್ತಿತ್ತು.  ಈ ವೇಳೆ ಇಬ್ಬರು ಕಾರ್ಮಿಕರು ಆಕಸ್ಮಿಕವಾಗಿ ಹೊಂಡದ ಒಳಗೆ ಬಿದ್ದಿದ್ದು, ಅವರ ಮೇಲೆಯೇ ಮಣ್ಣು ಬಿದ್ದ ಪರಿಣಾಮ ಮಣ್ಣಿನಡಿಯಲ್ಲಿ ಸಿಲುಕಿ ಇಬ್ಬರು  ಕಾರ್ಮಿಕರು ಕೂಡ ಮೃತಪಟ್ಟಿದ್ದಾರೆ.

ಪಾರ್ಪಳ್ಳ ನಿವಾಸಿಗಳಾದ ಬಾಬು ಮತ್ತು ರವಿ ಎಂಬವರು ಹೊಂಡದೊಳಗೆ ಬಿದ್ದು ಮೃತಪಟ್ಟ ಕಾರ್ಮಿಕರಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣವೇ ಕಾರ್ಮಿಕರನ್ನು ಮಣ್ಣಿನಿಂದ ಹೊರಗೆ ತೆಗೆಯಲು ಪ್ರಯತ್ನಿಸಿದ್ದಾರೆ.  ಆದರೆ ಅದಾಗಲೇ ಕಾರ್ಮಿಕರು ಮೃತಪಟ್ಟಿದ್ದಾರೆ. ಕಾರ್ಮಿಕರ ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.

whatsapp

ಇತ್ತೀಚಿನ ಸುದ್ದಿ